ಸಾವಿನ ಅಡುಗೆ: ತಟ್ಟೆಯಲ್ಲಿರೋದು ತರಕಾರಿಯಲ್ಲ- ಅದು ಸೀಸ ಸವರಿ ಸಿದ್ಧಪಡಿಸಿದ ಸಾವಿನ ಪಲ್ಯ!

ಬೆಂಗಳೂರು: ನಮ್ಮ ತಟ್ಟೆಯಲ್ಲಿರೋ ಆ ಬಣ್ಣ ಬಣ್ಣದ ತರಕಾರಿಗಳು ಈಗ ಕೇವಲ ಹಸಿವನ್ನಷ್ಟೇ ನೀಗಿಸುತ್ತಿಲ್ಲ, ಜೊತೆಗೆ ಸದ್ದಿಲ್ಲದೆ ನಮ್ಮ ಸಾವನ್ನೂ ಸಿದ್ಧಪಡಿಸುತ್ತಿವೆ. ಮಾರುಕಟ್ಟೆಗೆ ಬರುವ ಆ ತಾಜಾ ಬದನೆಕಾಯಿ, ಹೊಳೆಯುವ ಮೆಣಸಿನಕಾಯಿ ನೋಡಿ ನೀವು ಮರುಳಾಗಿದ್ದರೆ ಎಚ್ಚರ! ಏಕೆಂದರೆ, ನಾವು ಆರೋಗ್ಯಕ್ಕಾಗಿ ತಿನ್ನುವ ತರಕಾರಿಗಳಲ್ಲಿ ಈಗ ವಿಷದ ಹೊಳೆಯೇ ಹರಿಯುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಇತ್ತೀಚಿನ ರೇಡ್ ಮತ್ತು ಪರೀಕ್ಷೆಗಳು ಸಮಾಜವನ್ನೇ ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿವೆ. 70ಕ್ಕೂ ಹೆಚ್ಚು ತರಕಾರಿ ಸ್ಯಾಂಪಲ್‌ಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಮಾರಕವಾದ ʻಸೀಸ’ (Lead) ಮತ್ತು ನಿಷೇಧಿತ ಕೀಟನಾಶಕಗಳು ಹೇರಳವಾಗಿ ಪತ್ತೆಯಾಗಿವೆ.

ಆರ್ಗ್ಯಾನಿಕ್ ಹೆಸರಲ್ಲಿ ಆಗ್ತಿದೆ ಮೋಸ!
ಎಲ್ಲಕ್ಕಿಂತ ಭೀಕರ ಸತ್ಯ ಅಂದ್ರೆ, ನಾವು ಅತಿ ಹೆಚ್ಚು ಬೆಲೆ ಕೊಟ್ಟು ತರುವ ʻಆರ್ಗ್ಯಾನಿಕ್’ (Organic) ತರಕಾರಿಗಳಲ್ಲಿ ವಿಷದ ಪ್ರಮಾಣ ಇನ್ನೂ ಭಯಾನಕವಾಗಿದೆ. ಮಾರುಕಟ್ಟೆಯಲ್ಲಿ ಆರ್ಗ್ಯಾನಿಕ್ ಎಂದು ಮಾರಾಟವಾಗುತ್ತಿದ್ದ ಬದನೆಕಾಯಿಯಲ್ಲಿ ನಿಗದಿತ ಪ್ರಮಾಣಕ್ಕಿಂತ 20 ಪಟ್ಟು ಹೆಚ್ಚು ಸೀಸ ಪತ್ತೆಯಾಗಿದೆ! 0.1 ಮಿ.ಗ್ರಾಂ ಇರಬೇಕಾದ ಜಾಗದಲ್ಲಿ ಬರೋಬ್ಬರಿ 1.953 ಮಿ.ಗ್ರಾಂ ಸೀಸವನ್ನೇ ನಾವು ಸೇವಿಸುತ್ತಿದ್ದೇವೆ ಅಂದ್ರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಿ.

ನಿಮ್ಮ ನೆಚ್ಚಿನ ತರಕಾರಿಗಳಲ್ಲಿ ಮೃತ್ಯುವಿನ ನೆರಳು
ನಮ್ಮ ದೈನಂದಿನ ಅಡುಗೆಯ ಭಾಗವಾಗಿರುವ ತೊಂಡೆಕಾಯಿ, ಅವರೆಕಾಯಿ, ಸೊಪ್ಪು, ಕೋಸು ಮಾತ್ರವಲ್ಲದೆ ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಬೀಟ್‌ರೂಟ್ ಮತ್ತು ಹಾಗಲಕಾಯಿಯಲ್ಲೂ ಅತಿಯಾದ ರಾಸಾಯನಿಕಗಳಿವೆ. ನೆಲಮಂಗಲ, ರಾಜಾಜಿನಗರ ಮತ್ತು ಕೋಲಾರದ ಮಾರುಕಟ್ಟೆಗಳಿಂದ ತಂದ ಸ್ಯಾಂಪಲ್‌ಗಳು ನಮಗೆ ಕೊಡುತ್ತಿರುವ ಎಚ್ಚರಿಕೆ ಅಂತಿಂಥದ್ದಲ್ಲ.

ನಿಷೇಧಿತ ವಿಷದ ಅಟ್ಟಹಾಸ
ದೇಶದಲ್ಲಿ 2023ರಲ್ಲೇ ನಿಷೇಧಕ್ಕೊಳಗಾಗಿದ್ದ ʻಮೊನೋಕ್ರೋಟೊಫೋಸ್’ ಎಂಬ ವಿಷಕಾರಿ ಕೀಟನಾಶಕ ಈಗಲೂ ನಮ್ಮ ಮೆಣಸಿನಕಾಯಿಗಳಲ್ಲಿ ಪತ್ತೆಯಾಗುತ್ತಿದೆ. ಮೆಣಸಿನಕಾಯಿಯಲ್ಲಿ ನಿಗದಿತ ಮಿತಿಗಿಂತ ಎರಡು ಪಟ್ಟು ಹೆಚ್ಚು ವಿಷಕಾರಿ ಅಂಶವಿದೆ. ಅಂದರೆ, ಕಾನೂನು ಕಾಗದದ ಮೇಲಿದೆ, ಆದರೆ ವಿಷ ಮಾತ್ರ ನಮ್ಮ ಹರಿಯಲ್ಲಿ ಹರಿಯುತ್ತಿದೆ!

ನೆಲದಲ್ಲಿರುವ ವಿಷ ಮಣ್ಣಿನ ಮೂಲಕ ಮನುಷ್ಯನ ರಕ್ತಕ್ಕೆ ಸೇರುತ್ತಿದೆ. ನಾವು ಕೃಷಿ ಮಾಡ್ತಿರೋದು ವಿಷವನ್ನೋ ಅಥವಾ ಬೆಳೆಯನ್ನೋ ಎಂಬ ಅನುಮಾನ ಶುರುವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈಗ ಎಚ್ಚೆತ್ತುಕೊಂಡಿದೆ ನಿಜ, ಆದರೆ ನಮ್ಮ ಅಡುಗೆ ಮನೆಯ ಈ ಸಾವಿನ ವ್ಯಾಪಾರ ನಿಲ್ಲುವುದು ಯಾವಾಗ?

error: Content is protected !!