ಮಂಗಳೂರು: ಬೆನ್ನ ಹಿಂದೆ ನಿಂತು ಬೆನ್ನೆಲುಬಾಗಬೇಕಿದ್ದ ಉದ್ಯೋಗಿಯೇ, ಬೆನ್ನಿಗೆ ಚೂರಿ ಹಾಕುವ ʻಬ್ರೂಟಸ್’ ಆಗಿ ಬದಲಾದ ಕಥೆಯಿದು. ಅಂದಹಾಗೆ, ಈ ಕತೆಯ ವಿಲನ್ ಹೆಸರು ಅಭಿಷೇಕ್ ಸುರೇಂದ್ರ ಪೂಜಾರಿ. ಮೂಲತಹ ಉಡುಪಿಯ ಕಾಪು ನಿವಾಸಿ, ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಅನ್ನ ಹಾಕಿ ಆಶ್ರಯ ಕೊಟ್ಟ ಮಾಲೀಕರಿಗೇ ಹಾಕಿದ ಸ್ಕೆಚ್ ಕೇಳಿದರೆ ನೀವೂ ಬೆಚ್ಚಿಬೀಳ್ತೀರಿ!

ಎರಡು ವರ್ಷಗಳ ಹಿಂದೆ ಕಥೆ ಶುರುವಾಗುತ್ತದೆ. ಮಂಗಳೂರಿನ ಆ ಶಿಕ್ಷಣ ಸಂಸ್ಥೆಯ ಮಾಲೀಕರಿಗೆ ಅಭಿಷೇಕ್ ಒಂದು ಆಮಿಷವೊಡ್ಡುತ್ತಾನೆ. “ಸರ್, ನಮ್ಮ ಟ್ರೈನಿಂಗ್‌ಗೆ ದುಬೈನಲ್ಲಿ ಸಕ್ಕತ್ ಡಿಮ್ಯಾಂಡ್ ಇದೆ, ಅಲ್ಲಿಗೆ ಹೋಗೋಣ” ಎಂದು ನಂಬಿಸುತ್ತಾನೆ. ಆ ಮುಗ್ಧ ಮಾಲೀಕರೂ ಇವನ ಮಾತು ನಂಬಿ ಹಡಗು ಹತ್ತುತ್ತಾರೆ. ಆದರೆ ಅಲ್ಲಿ ಹೋದ ಮೇಲೆ ಗೊತ್ತಾಗಿದ್ದೇನೆಂದರೆ ಅಲ್ಲಿ ಅಂತಹ ಯಾವುದೇ ಡಿಮ್ಯಾಂಡ್ ಇರಲಿಲ್ಲ ಎನ್ನುವುದು.

ದುಬೈನಲ್ಲಿದ್ದಾಗ ಮಾಲೀಕರ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡ ಈತ, ನಂತರ ತನ್ನ ಅಸಲಿ ರೂಪ ತೋರಿಸಲು ಶುರು ಮಾಡುತ್ತಾನೆ. ಮಂಗಳೂರಿಗೆ ಮರಳಿದ ಮೇಲೆ “ನಿಮ್ಮ ವೀಡಿಯೋ ಮಾತ್ರವಲ್ಲ, ನಿಮ್ಮ ಮಗಳ ವೀಡಿಯೋ ಕೂಡ ನನ್ನ ಹತ್ರ ಇದೆ” ಎಂದು ಹೆದರಿಸಲು ಶುರು ಮಾಡಿದ. ವೀಡಿಯೋ ಡಿಲೀಟ್ ಮಾಡಬೇಕಾ? ಹಾಗಾದರೆ ಕೊಡಿ ಬರೋಬ್ಬರಿ 2 ಕೋಟಿ ರೂಪಾಯಿ! ಹೌದು, ಹಣದ ಹಪಹಪಿಕೆ ಈತನನ್ನು ಯಾವ ಮಟ್ಟಕ್ಕೆ ತಳ್ಳಿತೆಂದರೆ, ಆ ಹಣವನ್ನು ತನ್ನ ಹೆಂಡತಿ ಶ್ರೀನಿಧಿ ಪಟ್ಲಳ ಬ್ಯಾಂಕ್ ಅಕೌಂಟ್‌ಗೆ ಹಾಕುವಂತೆ ಡಿಮ್ಯಾಂಡ್ ಇಟ್ಟಿದ್ದ.
ಹಣ ಸಿಗದಿದ್ದಾಗ ಅಭಿಷೇಕ್ ಸುಮ್ಮನೆ ಕೂರಲಿಲ್ಲ. ತನ್ನ ವಿಕೃತಿಯನ್ನು ಅಕ್ಷರಶಃ ರಸ್ತೆಗೆ ತಂದ. ವೀಡಿಯೋಗಳನ್ನು ಕತ್ತರಿಸಿ, ಮಾರ್ಫ್ ಮಾಡಿ ಮಂಗಳೂರು ಮತ್ತು ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರಿಗೆ ವಾಟ್ಸಾಪ್ ಮೂಲಕ ರವಾನಿಸಿದ. ಬ್ಲ್ಯಾಕ್‌ಮೇಲ್ ಸಹಿಸಲಾಗದ ಮಾಲೀಕರ ಪುತ್ರಿ ಧೈರ್ಯ ಮಾಡಿ ಉರ್ವಾ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ತನಿಖೆ ಚುರುಕುಗೊಳಿಸಿದ ಪೊಲೀಸರು ಈಗ ಅಭಿಷೇಕ್‌ನನ್ನು ಜೈಲಿಗಟ್ಟಿದ್ದಾರೆ. ಹೆಂಡತಿ ಶ್ರೀನಿಧಿಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.
