ಮಂಗಳೂರು: ಶಿವಮೊಗ್ಗ ಜಿಲ್ಲೆಯ ಹೊರವಲಯದ ಊರುಗಡೂರಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸಂಕೇತ್ (16) ಎಂಬ ಬಾಲಕನ ಅಮಾನುಷ ಹತ್ಯೆ ಈಗ ಮಲೆನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅನ್ಯಕೋಮಿನ ನಾಲ್ವರು ಬಾಲಕರು ನಡೆಸಿದ ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದ್ದು, ಇದರ ಹಿಂದೆ ದೊಡ್ಡ ಸಂಚಿದೆ ಎಂಬ ಅನುಮಾನ ವ್ಯಕ್ತಪಡಿಸಿದೆ.

ಘಟನೆಯ ವಿವರ: ಕಳೆದ ಸೋಮವಾರ ಸಂಜೆ ಸಂಕೇತ್ ಅವರು ತಮ್ಮ ವಿಶೇಷ ತರಗತಿಯನ್ನು ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹೊಂಚು ಹಾಕಿದ್ದ ಅನ್ಯಕೋಮಿನ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಸಂಕೇತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಂಕೇತ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಹದಿಹರೆಯದ ಮಕ್ಕಳ ಈ ಕ್ರೌರ್ಯ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ.

ಡ್ರಗ್ಸ್ ಮಾಫಿಯಾದ ಶಂಕೆ:
ಮಂಗಳೂರಿನಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಹೆಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಅವರು, “ಹದಿನಾರರ ಹರೆಯದ ಮಕ್ಕಳಲ್ಲಿ ಇಷ್ಟು ದೊಡ್ಡ ಮಟ್ಟದ ದ್ವೇಷದ ಮಾನಸಿಕತೆ ತುಂಬಿದವರು ಯಾರು?” ಎಂದು ಪ್ರಶ್ನಿಸಿದ್ದಾರೆ. ಹಲ್ಲೆ ನಡೆಸಿದ ಬಾಲಕರು ಮಾದಕ ವಸ್ತುಗಳ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುವ ದೊಡ್ಡ ಜಾಲ ಇದರ ಹಿಂದೆ ಕೆಲಸ ಮಾಡುತ್ತಿರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಆಗ್ರಹ:
ಪ್ರಕರಣದ ಆಳ ಮತ್ತು ವಿಸ್ತಾರವನ್ನು ಗಮನಿಸಿದರೆ ಇದು ಕೇವಲ ವೈಯಕ್ತಿಕ ಜಗಳದಂತೆ ಕಾಣುತ್ತಿಲ್ಲ. ಇದರ ಹಿಂದೆ ಯಾರ ಪ್ರಚೋದನೆ ಇದೆ ಮತ್ತು ಯಾವ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬುದು ಪತ್ತೆಯಾಗಬೇಕಿದೆ. ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಮತ್ತು ಸಂಕೇತ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಶರಣ್ ಪಂಪುವೆಲ್ ಅವರು ಒತ್ತಾಯಿಸಿದ್ದಾರೆ.