ಮಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ರೈಲುಗಳ ವಿಳಂಬದ ಸಮಸ್ಯೆ ಹೆಚ್ಚುತ್ತಿದ್ದು, ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ಮತ್ತು ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ಸೇರಿದಂತೆ ಅನೇಕ ರೈಲುಗಳು ಸರಾಸರಿ ಅರ್ಧಗಂಟೆಯಿಂದ ಒಂದು ಗಂಟೆ ವರೆಗೆ ತಡವಾಗಿ ಸಂಚರಿಸುತ್ತಿವೆ. ಅಲ್ಲದೆ ವಿಜಯಪುರ-ಮಂಗಳೂರು ರೈಲು ಕೂಡ ವಿಳಂಬವಾಗುತ್ತಿದೆ.

ಈ ಹಿಂದೆ ಪಂಚಗಂಗಾ ರೈಲಿನ ಕ್ರಾಸಿಂಗ್‌ನ್ನು ಸಿರಿಬಾಗಿಲಿನಲ್ಲಿ ಮಾಡಲಾಗುತ್ತಿತ್ತು. ಆದರೆ ಸದ್ಯ ಸುಬ್ರಹ್ಮಣ್ಯದಲ್ಲಿ ಕ್ರಾಸಿಂಗ್ ಮಾಡುತ್ತಿರುವುದರಿಂದ ಇತರ ರೈಲುಗಳ ಸಂಚಾರದಲ್ಲಿ ವಿಳಂಬವಾಗುತ್ತಿದೆ ಎಂದು ರೈಲ್ವೇ ಬಳಕೆದಾರರು ದೂರಿದ್ದಾರೆ.
ಸೋಮವಾರ ಕಣ್ಣೂರು ಎಕ್ಸ್‌ಪ್ರೆಸ್ 1.15 ತಾಸು ತಡವಾಗಿ ಮಂಗಳೂರು ತಲುಪಿದೆ. ವಿಜಯಪುರ ಎಕ್ಸ್‌ಪ್ರೆಸ್ 45 ನಿಮಿಷ ತಡವಾಗಿ ಮಂಗಳೂರು ತಲುಪಿದೆ.


ಕ್ರಾಸಿಂಗ್ ಬದಲಾವಣೆಯಿಂದಾಗಿ ಘಾಟಿಯಿಂದ ಇಳಿಯುವ ರೈಲುಗಳಿಗೆ ಅಡ್ಡಿಯಾಗುತ್ತಿದೆ. ಇದು ಮಂಗಳೂರು- ಸುಬ್ರಹ್ಮಣ್ಯ ಸಹಿತ ಇತರ ಕೆಲವು ರೈಲುಗಳ ಸಂಚಾರದ ಮೇಲೂ ಪರಿಣಾಮವನ್ನುಂಟು ಮಾಡುತ್ತಿದೆ. ವೈದ್ಯರ ಭೇಟಿ, ಕಚೇರಿ, ಶಾಲಾ ಕಾಲೇಜು ಪರೀಕ್ಷೆ ಮೊದಲಾದವುಗಳಿಗೆ ಕ್ಲಪ್ತ ಸಮಯಕ್ಕೆ ತಲುಪಬೇಕಾದವರು ಸಂಕಷ್ಟಕ್ಕೀಡಾಗಿದ್ದು ರೈಲ್ವೇ ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.