ಶಿವಮೊಗ್ಗ: ಶಿವಮೊಗ್ಗದ ಹೊರವಲಯದಲ್ಲಿ ಅಪ್ರಾಪ್ತ ಬಾಲಕರೆಲ್ಲಾ ಸೇರಿ ತನ್ನದೇ ಸಹಪಾಠಿಯನ್ನು ಹತ್ಯೆ ಮಾಡಿರುವುದು ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಪೆನ್ನು ಹಿಡಿಯಬೇಕಾದ ಕೈಗಳು ಆಯುಧವನ್ನು ಹಿಡಿದು ಕೊಲೆ ಮಾಡುವ ಹಂತಕ್ಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಹತ್ತನೇ ತರಗತಿಯ ಸಂಕೇತ್ ಎಂಬ ಕನಸಿನ ಕುಡಿ ಚಿವುಟಿ ಹೋದ ಕಥೆಯ ಹಿಂದೆ ದ್ವೇಷ, ಡ್ರಗ್ಸ್ ಮಾಫಿಯಾದ ವಾಸನೆ ಇರುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 23ರ ಸೋಮವಾರ ಸಂಜೆ, ಸಂಕೇತ್ ತನ್ನ ವಿಶೇಷ ತರಗತಿಯನ್ನು ಮುಗಿಸಿ ಮನೆಗೆ ಮರಳುತ್ತಿದ್ದ. ಮಾರ್ಗಮಧ್ಯೆ ತನ್ನ ಗೆಳೆಯನ ಜೊತೆಗೆ ಅನ್ಯಕೋಮಿನ ಐವರು ಅಪ್ರಾಪ್ತ ಬಾಲಕರು ಜಗಳವಾಡುತ್ತಿರುವುದನ್ನು ಕಂಡು, ಸಂಕೇತ್ ಆ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದ. ಆದರೆ, ಮೃತ್ಯು ಅಲ್ಲಿಯೇ ಹೊಂಚು ಹಾಕಿತ್ತು. ಆ ಬಾಲಕರು ಸಂಕೇತ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಆತನ ಪ್ರಾಣವನ್ನೇ ತೆಗೆದರು. ಇದು ಕೇವಲ ಕ್ಷಣಿಕ ಆವೇಶವೋ ಅಥವಾ ವ್ಯವಸ್ಥಿತ ಸಂಚೋ ಎನ್ನುವ ಸಂಶಯ ಈಗ ಎಲ್ಲರನ್ನು ಕಾಡುತ್ತಿದೆ.

ಈ ಘಟನೆ ತಿಳಿಯುತ್ತಿದ್ದಂತೆಯೇ ಮಲೆನಾಡು ಕೆಂಡದಂತಾಗಿದೆ. ಘಟನೆಯನ್ನು ಖಂಡಿಸಿ ಸಾಲು ಸಾಲು ನಾಯಕರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ “ಇದು ಕೇವಲ ಜಗಳವಲ್ಲ, ಮಕ್ಕಳ ತಲೆಗೆ ದ್ವೇಷ ತುಂಬುತ್ತಿರುವ ಶಕ್ತಿಗಳ ಸಂಚು” ಎಂದು ಆರೋಪಿಸಿದ್ದಲ್ಲದೆ, ಹಂತಕರು ಡ್ರಗ್ಸ್ ಸೇವಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿ ಕಾರಿದ್ದು, “ನಮ್ಮ ಮಕ್ಕಳಿಗೆ ರಕ್ಷಣೆ ಎಲ್ಲಿದೆ?” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಅವರು ಎಂದಿನಂತೆ ತಮ್ಮ ಖಡಕ್ ಶೈಲಿಯಲ್ಲಿ ಪ್ರತಿಕ್ರಿಯಿಸಿ, ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ವಲಯ ಅಲ್ಲದೆ ಸ್ಥಳೀಯ ನಾಗರಿಕ ಸಮಿತಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ದೋಷಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪಟ್ಟು ಹಿಡಿದಿವೆ.

ಐವರು ಹಂತಕರ ಬಂಧನ
ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಶಿವಮೊಗ್ಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಐವರು ಅನ್ಯಕೋಮಿನ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, “ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ” ಎಂದು ಹೇಳಿದ್ದರೂ, ಇದು ವೈಯಕ್ತಿಕ ದ್ವೇಷ ಎನ್ನುವ ಮೂಲಕ ಪ್ರಕರಣದ ತೀವ್ರತೆಯನ್ನು ತಗ್ಗಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
15 ಲಕ್ಷದ ಪರಿಹಾರ
ಮಂಗಳವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಅವರು ಮೃತ ಸಂಕೇತ್ ಕುಟುಂಬಕ್ಕೆ ಸರ್ಕಾರದಿಂದ ಒಟ್ಟು 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. (ಸಿಎಂ ನಿಧಿಯಿಂದ 10 ಲಕ್ಷ ಹಾಗೂ ಶಿಕ್ಷಣ ಇಲಾಖೆಯಿಂದ 5 ಲಕ್ಷ). ಆದರೆ, ಈ 15 ಲಕ್ಷ ರೂಪಾಯಿ ಆ ಮನೆಯ ದೀಪವಾಗಿದ್ದ ಮಗನನ್ನು ಮರಳಿ ತರಲು ಸಾಧ್ಯವೇ? ಐವರು ಬಾಲಕರು ಇಂದು ಕಂಬಿ ಹಿಂದೆ ಇರಬಹುದು, ಆದರೆ ಮಕ್ಕಳನ್ನು ಹಂತಕರನ್ನಾಗಿ ಮಾಡುತ್ತಿರುವ ಆ ʻಅಸಲಿ ಮಾಫಿಯಾ’ ಯಾವುದು ಎನ್ನುವುದು ಬಯಲಾಗಬೇಕಿದೆ.
