ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬಿಎಮ್‌ಎಸ್ ಸಮರ: ಮಂಗಳೂರಿನಲ್ಲಿ ಬೃಹತ್ ಧರಣಿ, ಪ್ರಧಾನಿಗೆ ಮನವಿ

ಮಂಗಳೂರು: ಕಾರ್ಮಿಕರ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಭಾರತೀಯ ಮಜ್ದೂರ್ ಸಂಘ (BMS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಿಎಮ್‌ಎಸ್ ಜಿಲ್ಲಾ ಅಧ್ಯಕ್ಷರಾದ ವಕೀಲ ಅನಿಲ್ ಕುಮಾರ್ ಯು. ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿವಿಧ ವಲಯಗಳ ನೂರಾರು ಕಾರ್ಮಿಕರು ಪಾಲ್ಗೊಂಡು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಎದುರು ನಡೆದ ಈ ಧರಣಿಯ ಮೂಲಕ ಮಾನ್ಯ ಪ್ರಧಾನಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ಕಾರ್ಮಿಕ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ಸ್ವಾಗತಿಸಿದರೂ, ಅದರಲ್ಲಿರುವ ಕೆಲವು ಕಾರ್ಮಿಕ ವಿರೋಧಿ ಅಂಶಗಳ ಬಗ್ಗೆ ಮತ್ತು ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ವಿಶೇಷವಾಗಿ ಇಪಿಎಸ್-95 ಕನಿಷ್ಠ ಪಿಂಚಣಿಯನ್ನು ₹7,500ಕ್ಕೆ ಹೆಚ್ಚಿಸುವುದು, ದರ ಏರಿಕೆ ಭತ್ಯೆ ಜಾರಿ ಹಾಗೂ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯಗಳ ವೇತನ ಮಿತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಲಾಯಿತು. ಅಲ್ಲದೆ, ಆಶಾ, ಅಂಗನವಾಡಿ, ಮಧ್ಯಾಹ್ನ ಊಟದ ಯೋಜನೆ ಹಾಗೂ ಎನ್‌ಎಚ್‌ಎಂ ಅಡಿಯಲ್ಲಿ ದುಡಿಯುತ್ತಿರುವ ಯೋಜನಾ ಕಾರ್ಮಿಕರ ಗೌರವಧನವನ್ನು ಹೆಚ್ಚಿಸಿ ಅವರ ಸೇವೆಯನ್ನು ಕಾಯಂಗೊಳಿಸಬೇಕು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಯಿತು.

ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಾಕಿ ಇರುವ ವೇತನ ಪಾವತಿ ಹಾಗೂ ಕರ್ನಾಟಕ ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದರೊಂದಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು. ಕೈಗಾರಿಕಾ ಸಂಬಂಧಗಳ ಸಂಹಿತೆ ಮತ್ತು ಔದ್ಯೋಗಿಕ ಸುರಕ್ಷತೆ ಕಾಯ್ದೆಗಳಲ್ಲಿರುವ ಕಾರ್ಮಿಕರ ಆತಂಕಗಳನ್ನು ದೂರ ಮಾಡಲು ಅಗತ್ಯ ತಿದ್ದುಪಡಿಗಳನ್ನು ತರಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವಾತ್ಮಕವಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಸಮಿತಿಯು ಎಚ್ಚರಿಸಿದೆ.

ಪ್ರತಿಭಟನೆಯ ನಂತರ ಸಂಘಟನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಉಪ ಆಯುಕ್ತ ಅಂಕಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಎಮ್‌ಎಸ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಜಯರಾಜ್ ಸಾಲ್ಯಾನ್, ವಿಜಯಲಕ್ಷ್ಮಿ, ಗೋಪಾಲಕೃಷ್ಣ, ರೋಹಿತಾಶ್ವ, ಉದಯ ಕುಮಾರ್, ವಿಗ್ನೇಶ್ ಸೇರಿದಂತೆ ವಿವಿಧ ವಲಯಗಳ ಪ್ರಮುಖ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!