ಢಾಕಾ: ಬಾಂಗ್ಲಾದೇಶದ ಚುನಾವಣಾ ಫಲಿತಾಂಶ ಹೊರಬಿದ್ದಾಗ ಎಲ್ಲರ ಕಣ್ಣು ಬಿಎನ್‌ಪಿ ಮೇಲಿತ್ತು. ಆದರೆ, ಆ ಸಂಭ್ರಮದ ಹಿಂದೆಯೇ ಒಂದು ಕರಾಳ ನೆರಳು ನಿಧಾನವಾಗಿ ಜೈಲು ಹಕ್ಕಿಯಂತೆ ಹೊರಬಂದಿದೆ. ಅದುವೇ ಜಮಾತ್-ಇ-ಇಸ್ಲಾಮಿ. ಹೌದು… 2008ರಲ್ಲಿ ಕೇವಲ 2 ಸ್ಥಾನಕ್ಕೆ ಕುಸಿದಿದ್ದ, ಶೇಖ್ ಹಸೀನಾ ಕಾಲದಲ್ಲಿ ಬ್ಯಾನ್ ಆಗಿದ್ದ ಈ ಪಕ್ಷ ಈಗ ಬರೋಬ್ಬರಿ 68 ಸ್ಥಾನಗಳನ್ನು ಗೆದ್ದು ಎರಡನೇ ಅತಿದೊಡ್ಡ ಶಕ್ತಿಯಾಗಿ ಅಬ್ಬರಿಸುತ್ತಿದೆ. ಇದು ತಾರಿಕ್ ರೆಹಮಾನ್ ಪಾಲಿಗೆ ಗೆಲುವಿನ ಸಿಹಿಯ ಜೊತೆಗೆ ಬಂದಿರುವ ಆಡಳಿತದ ಕಹಿ!

ಪಾಕಿಸ್ತಾನದ ವಾಸನೆ ಮತ್ತು ಗಡಿಭಾಗದ ನಡುಕ:
ವಿಶೇಷ ಅಂದ್ರೆ, ಈ ಜಮಾತ್ ಗೆದ್ದಿರೋದು ಎಲ್ಲಿ ಗೊತ್ತಾ? ಭಾರತದ ಗಡಿಗೆ ತಾಗಿಕೊಂಡಿರುವ ಪಶ್ಚಿಮ ಬಾಂಗ್ಲಾದೇಶದ ಜಿಲ್ಲೆಗಳಲ್ಲಿ! ಇದು ದೆಹಲಿಯ ಆಡಳಿತಗಾರರ ನಿದ್ದೆ ಗೆಡಿಸಿದೆ. ಯಾಕೆಂದರೆ, ಜಮಾತ್ ಎಂಬುದು ಕೇವಲ ಒಂದು ರಾಜಕೀಯ ಪಕ್ಷವಲ್ಲ; ಅದು ಪಾಕಿಸ್ತಾನದ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಒಂದು ಉಗ್ರ ಸಂಘಟನೆಯಂತೆ ವರ್ತಿಸುವ ಗುಂಪು. ಇದು ತಾರಿಕ್ ರೆಹಮಾನ್ ಅವರ ಸೌಮ್ಯ ರಾಜತಾಂತ್ರಿಕತೆಗೆ ಸವಾಲಾಗಬಹುದು.
ದೋಸ್ತಿಯೋ ಅಥವಾ ದ್ರೋಹವೋ?
ಚುನಾವಣೆಗೆ ಮುನ್ನ ಬಿಎನ್‌ಪಿ ಮತ್ತು ಜಮಾತ್ ನಡುವೆ ಕಿತ್ತಾಟ ನಡೆದಿತ್ತು. ಅಣ್ಣಾಮಲೈ ತಮಿಳುನಾಡಿನಲ್ಲಿ ಒಂಟಿಯಾದಂತೆ, ತಾರಿಕ್ ರೆಹಮಾನ್ ಕೂಡ ಜಮಾತ್ ಜೊತೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದ್ದರು. ಆದರೆ ಈಗ, ಜಮಾತ್ ಇಲ್ಲದೆ ಆಡಳಿತ ಮಾಡುವುದು ತಾರಿಕ್ ಅವರಿಗೆ ಸುಲಭದ ಮಾತಲ್ಲ. ಸಂಸತ್ತಿನಲ್ಲಿ ಪ್ರತಿಯೊಂದು ಬಿಲ್ ಪಾಸ್ ಮಾಡಬೇಕೆಂದರೂ ಈ ʻಧರ್ಮಾಂಧ’ರ ಹಂಗಿಗೆ ಬೀಳಬೇಕಾದ ಪರಿಸ್ಥಿತಿ ಬರಬಹುದು.
ಭಾರತಕ್ಕೆ ಎಚ್ಚರಿಕೆಯ ಗಂಟೆ:
ನಮ್ಮ ಬಂಗಾಳದ ಗಡಿಗಳಲ್ಲಿ ಈಗ ಹದ್ದಿನ ಕಣ್ಣು ಇಡಲೇಬೇಕಿದೆ. ಜಮಾತ್ ಗೆದ್ದಿರುವ ಕ್ಷೇತ್ರಗಳು ನಮ್ಮ ಮಾಲ್ಡಾ, ಮುರ್ಷಿದಾಬಾದ್ ಮತ್ತು ನಾಡಿಯಾ ಜಿಲ್ಲೆಗಳಿಗೆ ಬಹಳ ಹತ್ತಿರದಲ್ಲಿವೆ. ಈ ಪಕ್ಷದ ಗೆಲುವು ಆ ಭಾಗದಲ್ಲಿ ಉಗ್ರವಾದಕ್ಕೆ ಮತ್ತೆ ನೀರೆರೆಯಬಹುದು ಎಂಬ ಆತಂಕ ತಜ್ಞರಲ್ಲಿದೆ. ತಾರಿಕ್ ರೆಹಮಾನ್ ಅವರು ಈ ಕಪ್ಪು ನೆರಳನ್ನು ಹೇಗೆ ನಿಭಾಯಿಸುತ್ತಾರೆ? ಅಥವಾ ಅವರೇ ಈ ನೆರಳಿನೊಳಗೆ ಕಳೆದು ಹೋಗುತ್ತಾರಾ? ಬಾಂಗ್ಲಾದ ಈ ಆಟ ಈಗವಷ್ಟೇ ಶುರುವಾಗಿದೆ!