ಮಂಡ್ಯ: ಮಕ್ಕಳನ್ನು ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಕೂಲಿ ಆಳುಗಳಂತೆ ಗಾರೆ ಕೆಲಸ ಮಾಡಲು ಶಿಕ್ಷಕರು ಒತ್ತಾಯಿಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ನಲಕುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ವಿಡಿಯೋದಲ್ಲಿ ಮಕ್ಕಳು ಸಿಮೆಂಟ್, ಮರಳು ಸಾಗಿಸುವ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದೆ.

ಈ ಘಟನೆ ಕುರಿತು ಸ್ಥಳೀಯರು ಶಿಕ್ಷಕರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಮಕ್ಕಳನ್ನು ಇಂತಹ ಕಠಿಣ ಕೆಲಸಗಳಿಗೆ ಬಳಸಿಕೊಳ್ಳುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಂದ ಯಾವುದೇ ರೀತಿಯ ಕೆಲಸಗಳನ್ನು ಮಾಡಿಸಬಾರದು ಎಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಶಿಕ್ಷಕರು ನಿಯಮಗಳನ್ನು ಉಲ್ಲಂಘಿಸಿಸಿದ್ದಾರೆ.

ಕಾಮಗಾರಿಗೆ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗಿರುತ್ತದೆ, ಹಾಗಿದ್ದರೂ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಸ್ಥಳೀಯರು ಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ ಹೆಣ್ಣುಮಗುವೊಂದು ಸಿಮೆಂಟ್ ಸಾಗಿಸುತ್ತಿರುವುದು ಕೂಡ ಕಾಣಿಸಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.