ನ್ಯೂ ಇಯರ್‌ ಪಾರ್ಟಿ: ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ

ಮಂಗಳೂರು: 2026ರ ಹೊಸ ವರ್ಷಾಚರಣೆಯನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯೊಂದಿಗೆ ಆಚರಿಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಮಂಗಳೂರು ಪೊಲೀಸ್‌ ಕಮೀಷನರ್‌ ಸುಧೀರ್‌ ರೆಡ್ಡಿ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಅಥವಾ ಕಿರುಕುಳ ಉಂಟಾಗದಂತೆ ಜವಾಬ್ದಾರಿತಯತೆಯಿಂದ ವರ್ತಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸಂಭ್ರಮಾಚರಣೆ ಹೆಸರಿನಲ್ಲಿ ಅತೀವೇಗದ ಚಾಲನೆ, ವೀಲಿಂಗ್, ಅಸಭ್ಯ ವರ್ತನೆ ಸೇರಿದಂತೆ ಸಾರ್ವಜನಿಕ ಶಾಂತಿ ಭಂಗಗೊಳಿಸುವ ಯಾವುದೇ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನಗರದಾದ್ಯಂತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದ್ದು, ಪಿಸಿಆರ್ ವಾಹನಗಳು, ಹೈವೇ ಪೆಟ್ರೋಲ್ ವಾಹನಗಳು, ಚೆಕ್‌ಪೋಸ್ಟ್‌ಗಳು, ಪಿಕೆಟಿಂಗ್ ಪಾಯಿಂಟ್‌ಗಳು ಹಾಗೂ ನಿರಂತರ ರೌಂಡ್ಸ್ ಕರ್ತವ್ಯಕ್ಕೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ, ಎಫ್‌ಎಎಫ್ ಮತ್ತು ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಯಾವುದೇ ತುರ್ತು ಪರಿಸ್ಥಿತಿ ಅಥವಾ ಸಾರ್ವಜನಿಕ ದೂರುಗಳಿಗಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸ್ ಇಲಾಖೆ ತಿಳಿಸಿದ್ದು, 112 ಸಂಪರ್ಕ ಸಾಧ್ಯವಾಗದಿದ್ದಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 0824-2220800 ಅಥವಾ 9480802321 ಗೆ ಸಂಪರ್ಕಿಸಬಹುದು ಎಂದು ಕಮೀಷನರ್‌ ಸುಧೀರ್‌ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!