ಬೆಂಗಳೂರು / ನಾಗಪುರ: ಮದುವೆಯಾಗಿ ಕೇವಲ ಎರಡು ತಿಂಗಳಷ್ಟೇ ಕಳೆದಿದ್ದ ನವವಿವಾಹಿತೆ ಗಾನವಿ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟ ಪ್ರಕರಣಕ್ಕೆ ಇದೀಗ ಮತ್ತೊಂದು ಹೃದಯವಿದ್ರಾವಕ ತಿರುವು ಸಿಕ್ಕಿದೆ. ಪತ್ನಿಯ ಸಾವಿನ ಆಘಾತದಿಂದ ಹೊರಬರಲಾಗದೆ, ಗಾನವಿಯ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಈತನ ತಾಯಿ ಜಯಂತಿ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದು, ಇಡೀ ಕುಟುಂಬವನ್ನು ದುರಂತದ ಅಂಚಿಗೆ ತಳ್ಳಿದೆ.
/newsfirstprime/media/media_files/2025/12/27/bengaluru-ganavi-case-2025-12-27-09-43-57.jpg)
ಹೊಸ ಬದುಕಿನ ಕನಸುಗಳೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದ ಗಾನವಿ–ಸೂರಜ್ ಜೋಡಿ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದರು. ಆದರೆ ಈ ಪ್ರವಾಸವೇ ಅವರ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಯಿತು. ವರದಿಗಳ ಪ್ರಕಾರ, ಗಾನವಿಯ ವಿವಾಹಪೂರ್ವ ಸಂಬಂಧದ ವಿಚಾರವನ್ನು ಕೇಂದ್ರವಾಗಿಸಿಕೊಂಡು ಇಬ್ಬರ ನಡುವೆ ತೀವ್ರ ಕಲಹ ಉಂಟಾಗಿತ್ತು. ಇದರಿಂದ ಮನನೊಂದ ಗಾನವಿ ಹನಿಮೂನ್ ಅನ್ನು ಅರ್ಧಕ್ಕೆ ಕಡಿತಗೊಳಿಸಿ ಒಬ್ಬರೇ ಬೆಂಗಳೂರಿಗೆ ಮರಳಿದ್ದರು.

ಶ್ರೀಲಂಕಾದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಬ್ರೈನ್ ಡೆಡ್ ಆಗಿ ಕೊನೆಯುಸಿರೆಳೆದರು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಗಾನವಿ ಮನೆಯವರು ಸೂರಜ್ ವಿರುದ್ಧ ವರದಕ್ಷಿಣೆ ಆರೋಪ ಮಾಡಿದ್ದರು. ಸೂರಜ್ ಆತ ನಪುಂಸಕ ಎನ್ನುವ ಗಂಭೀರ ಆರೋಪವನ್ನೂ ಮಾಡಿದ್ದರು. ಅವಮಾನ ಮತ್ತು ಟೀಕೆಗಳನ್ನು ತಡೆದುಕೊಳ್ಳಲಾಗದೆ ಮನನೊಂದು ಸೂರಜ್ ಮತ್ತು ಆತನ ತಾಯಿ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ.

ಈ ದುರಂತದ ನೋವು ಮಾಸುವ ಮುನ್ನವೇ, ಪತಿ ಸೂರಜ್ ಮಹಾರಾಷ್ಟ್ರದ ನಾಗಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿಯ ನಿಧನದ ಬಳಿಕ ಸೂರಜ್ ತನ್ನ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಪತ್ನಿಯ ಸಾವಿನ ನಂತರ ಗಾನವಿಯ ಪೋಷಕರು ಹಾಗೂ ಸಂಬಂಧಿಕರಿಂದ ಎದುರಾದ ಆಕ್ರೋಶ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅವಮಾನವನ್ನು ಸಹಿಸಲಾಗದೆ ಸೂರಜ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. “ಮರ್ಯಾದೆಗೆ ಅಂಜಿ” ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ದುರಂತಗಳ ಸರಮಾಲೆ ಇಲ್ಲಿಗೇ ನಿಲ್ಲದೆ, ಸೂರಜ್ ಅವರ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ಆತ್ಮಹತ್ಯೆಯಿಂದ ಆರಂಭವಾದ ಈ ಪ್ರಕರಣ, ಈಗ ಒಂದೇ ಕುಟುಂಬದಲ್ಲಿ ನಡೆದ ಸರಣಿ ದುರಂತವಾಗಿ ಪರಿವರ್ತನೆಯಾಗಿದೆ. ಶ್ರೀಲಂಕಾದಲ್ಲಿ ಆರಂಭವಾದ ಮನಸ್ತಾಪ, ಬೆಂಗಳೂರಿನಲ್ಲಿ ಪತ್ನಿಯ ಸಾವಿಗೆ, ನಾಗಪುರದಲ್ಲಿ ಪತಿಯ ಆತ್ಮಹತ್ಯೆ ಹಾಗೂ ತಾಯಿಯ ಆತ್ಮಹತ್ಯಾ ಯತ್ನಕ್ಕೆ ಕಾರಣವಾಗಿದ್ದು, ಸಮಾಜದಲ್ಲಿ ಮಾನಸಿಕ ಒತ್ತಡ, ಪ್ರತಿಷ್ಠೆ ಮತ್ತು “ಮರ್ಯಾದೆ” ಎಂಬ ಅತಿಭಾರದ ಭೀಕರ ಪರಿಣಾಮವನ್ನು ಮತ್ತೆ ಒತ್ತಿ ಹೇಳಿದೆ.
ಈ ಘಟನೆ, ಒಂದು ದುರಂತದ ನೋವು ಇಡೀ ಕುಟುಂಬವನ್ನೇ ಹೇಗೆ ತನ್ನೊಳಗೆ ಎಳೆದುಕೊಂಡು ಹೋಗಬಲ್ಲದು ಎಂಬುದಕ್ಕೆ ಕಟು ಸಾಕ್ಷಿಯಾಗಿದೆ.
