ಕರಾಚಿ: ಬಹ್ರೇನ್‌ನಲ್ಲಿ ಆಯೋಜನೆಗೊಂಡಿದ್ದ ಕಬಡ್ಡಿ ಟೂರ್ನಿಯಲ್ಲಿ ಪಾಕಿಸ್ತಾನದ ಖ್ಯಾತ ಕಬಡ್ಡಿ ಪಟ್ಟು ಉಬೈದುಲ್ಲ ರಜಪೂತ್ ಭಾರತ ತಂಡ ಪ್ರತಿನಿಧಿಸಿದ್ದಾರೆ. ಭಾರತ-ಪಾಕ್ ಎಂಬ ಭೇದವಿಲ್ಲದೆ ಖಾಸಗಿ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ಪಾಕಿಸ್ತಾನಿ ಆಟಗಾರ ಉಬೈದುಲ್ಲ ರಜಪೂತ್ ಮೇಲೆ ಪಾಕಿಸ್ತಾನ್ ಕಬಡ್ಡಿ ಫೆಡರೇಶನ್ (ಪಿಕೆಎಫ್) ಅನಿರ್ದಿಷ್ಟಾವಧಿ ನಿಷೇಧ ಹೇರಿದೆ.

ಪಾಕಿಸ್ತಾನ ಕಬಡ್ಡಿ ಪಟ್ಟು ಉಬೈದುಲ್ಲಾ ರಜಪೂತ್ ನಡೆಯನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸಿ, ಕಬಡ್ಡಿ ಫೆಡರೇಶನ್ ತುರ್ತು ಸಭೆ ಕರೆದಿತ್ತು ಎನ್ನಲಾಗಿದೆ. ಉಬೈದುಲ್ಲಾ ರಜಪೂತ್ ಜೊತೆಗೆ ಈ ಟೂರ್ನಿಯಲ್ಲಿ ಪಾಲ್ಗೊಂಡ ಇತರ ಪಾಕಿಸ್ತಾನ ಕಬಡ್ಡಿ ಆಟಗಾರರ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಈ ಸಭೆ ಕರೆದಿರುವುದಾಗಿದೆ.
ಉಬೈದುಲ್ಲ ಭಾರತ ತಂಡದ ಪರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮುನ್ನ ಪಿಕೆಎಫ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಎನ್‌ಒಸಿ ಪತ್ರ ಪಡೆದಿರಲಿಲ್ಲ. ಆಟಗಾರರು ಎನ್‌ಒಸಿ ಪಡೆಯುವುದು ಕಡ್ಡಾಯವಾಗಿರುವುದರಿಂದ ಉಬೈದುಲ್ಲ ತಪ್ಪೆಸಗಿದ್ದಾರೆ ಎಂದು ಪಿಕೆಎಫ್ ಹೇಳಿದೆ.
ಉಬೈದುಲ್ಲ ರಜಪೂತ್ ಭಾರತ ತಂಡದ ಹೆಸರಿರುವ ಜೆರ್ಸಿ ಧರಿಸಿ, ತ್ರಿವರ್ಣ ಧ್ವಜ ಹಿಡಿದಿರುವ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪಿಕೆಎಫ್ ಅವರನ್ನು ತನಿಖೆ ನಡೆಸಿ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ.