ಬೆಳ್ತಂಗಡಿ: ಮೆದುಳಿನ ರಕ್ತಸ್ರಾವದಿಂದ ಯುವತಿಯೊಬ್ಬಳು ಮೃತಪಟ್ಟ ದುರ್ಘಟನೆ ನಡೆದಿದ್ದು, ಆಕೆಯ ಕುಟುಂಬದ ಮಹತ್ವದ ನಿರ್ಧಾರದಿಂದ ಹಲವು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ಮೂಡಿದೆ.
ಮೃತ ಯುವತಿ ಸುಳ್ಯದ ರಥಬೀದಿ ನಿವಾಸಿ ಮಮತಾ ಅವರ ಪುತ್ರಿ ಸಿಂಧು ಎಂದು ಗುರುತಿಸಲಾಗಿದೆ.

ಪುತ್ತೂರು ಆದರ್ಶ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದ ಸಿಂಧು ಡಿಸೆಂಬರ್ 16ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಡ್ಯಾರ್ ಬಳಿ ಬಸ್‌ನ ಸೀಟಿನಿಂದ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಬಸ್‌ನಲ್ಲಿದ್ದವರು ಆಕೆಯನ್ನು ಹಿಡಿದುಕೊಂಡು ಪ್ರಾಥಮಿಕವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆಯ ವೇಳೆ ನರ ಸಂಬಂಧಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಮರುದಿನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮೆದುಳಿನ ರಕ್ತಸ್ರಾವ ಉಂಟಾಗಿರುವುದು ದೃಢಪಟ್ಟಿದ್ದು, ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಕೆಲಕಾಲ ಪ್ರಜ್ಞೆ ಬಂದಿತ್ತಾದರೂ, ನಂತರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಸಿಂಧು ಕೋಮಾಗೆ ಜಾರಿದರು.

ವೈದ್ಯರ ಸಲಹೆ ಮೇರೆಗೆ, ಮೆದುಳು ಕಾರ್ಯನಿರತವಾಗದಿದ್ದರೂ ಯಂತ್ರಗಳ ಸಹಾಯದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್ ಹಾಗೂ ಕಣ್ಣುಗಳು ಸೇರಿದಂತೆ ಪ್ರಮುಖ ಅಂಗಾಂಗಗಳನ್ನು ಉಳಿಸಬಹುದೆಂದು ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ತಾಯಿ ಮಮತಾ ಅವರು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ, ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು.
ಅದರಂತೆ ಮೈಸೂರಿನ ಅಪೋಲೋ ಆಸ್ಪತ್ರೆ, ನಿಟ್ಟೆ, ಎ.ಜೆ. ಹಾಗೂ ಕೆ.ಎಂ.ಸಿ. ಆಸ್ಪತ್ರೆಗಳಿಗೆ ಸಿಂಧುವಿನ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಈ ಮೂಲಕ ಹಲವು ರೋಗಿಗಳಿಗೆ ಜೀವದಾನ ಮಾಡಿದಂತಾಗಿದೆ.
ಮೆದುಳಿನ ರಕ್ತಸ್ರಾವ (Brain Hemorrhage) ಎಂದರೆ ಮೆದುಳಿನ ರಕ್ತನಾಳ ಒಡೆದು ರಕ್ತವು ಮೆದುಳಿನ ಒಳಭಾಗಕ್ಕೆ ಹರಿಯುವ ಗಂಭೀರ ಸ್ಥಿತಿ. ತಲೆಗಾಯ, ರಕ್ತದ ಒತ್ತಡ ಹೆಚ್ಚಳ, ರಕ್ತನಾಳಗಳ ದುರ್ಬಲತೆ ಅಥವಾ ನರ ಸಂಬಂಧಿ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ತೀವ್ರ ತಲೆನೋವು, ವಾಂತಿ, ಪ್ರಜ್ಞೆ ತಪ್ಪುವುದು, ಮಾತು ಅಥವಾ ಚಲನೆಗೆ ತೊಂದರೆ ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.