ಮಂಗಳೂರು: ಕರ್ನಾಟಕ ರಾಜ್ಯದ ಎಸ್‌ಬಿಐ, ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿ ಟೆಂಪರರಿ, ಗುತ್ತಿಗೆ ಹಾಗೂ ಕ್ಯಾಷುವಲ್ ಸಬ್ ಸ್ಟಾಫ್ ಕಾರ್ಮಿಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಹಾಗೂ ವೇತನ–ಸೌಲಭ್ಯ ವಂಚನೆ ಖಂಡಿಸಿ ಡಿಸೆಂಬರ್ 27ರಂದು ಕಾವೂರಿನ ಶ್ರೀಗುರು ರಾಘವೇಂದ್ರ ಮಠದಲ್ಲಿ ರಾಜ್ಯಮಟ್ಟದ ಜಂಟಿ ಸಮಾವೇಶ ನಡೆಯಲಿದೆ ಎಂದು ಬ್ಯಾಂಕುಗಳ ಟೆಂಪರರಿ ಸಬ್ ಸ್ಟಾಫ್ ಗುತ್ತಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಎಂ. ರಾಮ ರಾವ್, ಬ್ಯಾಂಕುಗಳಲ್ಲಿ ಸಬ್ ಸ್ಟಾಫ್ ಹುದ್ದೆಗಳು ಖಾಯಂ ಸ್ವರೂಪದ್ದಾಗಿದ್ದರೂ ವರ್ಷಗಳಿಂದ ಗುತ್ತಿಗೆ ಹಾಗೂ ಟೆಂಪರರಿ ಕಾರ್ಮಿಕರಿಂದಲೇ ಕೆಲಸ ಮಾಡಿಸಿಕೊಂಡು, ಖಾಯಂ ಸಬ್ ಸ್ಟಾಫ್‌ಗಳಿಗೆ ಅನ್ವಯಿಸುವ ವೇತನ ಶ್ರೇಣಿ, ವಾರದ ಹಾಗೂ ರಾಷ್ಟ್ರೀಯ ರಜೆ ವೇತನ, ಪಿಎಲ್, ಕ್ಯಾಷುವಲ್ ರಜೆ, ಬೋನಸ್, ಪಿಎಫ್, ಗ್ರಾಚ್ಯುಯಿಟಿ, ಹೆರಿಗೆ ರಜೆ ಸೇರಿದಂತೆ ಯಾವುದೇ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಕ್ಲೀನಿಂಗ್ ಹೆಸರಿನಲ್ಲಿ ನೇಮಿಸಿದ ಕಾರ್ಮಿಕರಿಂದ ಅಟೆಂಡರ್, ಕಚೇರಿ ಸಹಾಯಕ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಸಂಪೂರ್ಣ ಸಬ್ ಸ್ಟಾಫ್ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಮಹಿಳಾ ಕಾರ್ಮಿಕರ ಮೇಲೆ ರಾತ್ರಿ ತಡವರೆಗೂ ಕೆಲಸ ಮಾಡಿಸುವುದು, ಬೆದರಿಕೆ, ಕಡಿಮೆ ವೇತನ ನೀಡುವುದು ಹಾಗೂ ದೈಹಿಕ–ಮಾನಸಿಕ ಶೋಷಣೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಗುತ್ತಿಗೆ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗುತ್ತಿದ್ದು, ಕೆಲ ಬ್ಯಾಂಕ್ ಅಧಿಕಾರಿಗಳೇ ಗುತ್ತಿಗೆ ಏಜೆನ್ಸಿಗಳ ಮೂಲಕ ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರಿದರು. ಗುತ್ತಿಗೆ ಹಾಗೂ ನೇರ ಕಾರ್ಮಿಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದರೂ ಬ್ಯಾಂಕುಗಳು ಅದನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತ ಶೇಖರ ಕೆ. ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಮಾವೇಶದಲ್ಲಿ ಎಲ್ಲಾ ಬ್ಯಾಂಕುಗಳ ಟೆಂಪರರಿ/ಗುತ್ತಿಗೆ/ಕ್ಯಾಷುವಲ್ ಸಬ್ ಸ್ಟಾಫ್‌ರನ್ನು ತಕ್ಷಣ ಖಾಯಂ ಮಾಡುವುದು, ಗುತ್ತಿಗೆ ಪದ್ಧತಿ ರದ್ದುಪಡಿಸುವುದು, ಖಾಯಂ ಸಬ್ ಸ್ಟಾಫ್‌ಗಳ ಪ್ರಾರಂಭಿಕ ವೇತನ ಶ್ರೇಣಿ ಸೇರಿದಂತೆ ಎಲ್ಲಾ ಬಾಕಿ ಸೌಲಭ್ಯಗಳನ್ನು ಕೂಡಲೇ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್ ಆಡಳಿತಗಳಿಗೆ ಒತ್ತಾಯಿಸಲಾಗುವುದು ಎಂದು ರಾಮರಾವ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ಜಿ. ಯೋಗ ನರಸಿಂಹ, ಕಾರ್ಯದರ್ಶಿಗಳಾದ ಪುನೀತ, ಪುರುಶೋತ್ತಮ, ಜಗದೀಶ, ರಾಮಚಂದ್ರ, ಶಿವಾನಂದ ಪೆನಗೊಂಡ, ಶ್ರೀನಿವಾಸ ರಾಜು, ರಾಮಕೃಷ್ಣ ಡಿ. ಉಪಸ್ಥಿತರಿದ್ದರು.