ವಿಕೃತ ಮನಸ್ಸುಗಳನ್ನ ದೈವಗಳೇ ಸರಿದಾರಿಗೆ ತರಲಿ: ಬಾರೆಬೈಲ್‌ನಲ್ಲಿ ತಮ್ಮಣ್ಣ ಶೆಟ್ಟಿ ಪ್ರಾರ್ಥನೆ

ಮಂಗಳೂರು: ಕಾಂತಾರ ಚಿತ್ರ ನಟ ರಿಷಬ್‌ ಶೆಟ್ಟಿ ಹರಕೆಯ ನೇಮದ ವಿಚಾರವಾಗಿ ತುಳುನಾಡು ದೈವ ವಿಮರ್ಶಕ ತಮ್ಮಣ್ಣ ಶೆಟ್ಟಿ ಹಾಗೂ ಯೆಯ್ಯಾಡಿ ಬಾರೆಬೈಲ್‌ ವಾರಾಹಿ ಪಂಜುರ್ಲಿ ಕ್ಷೇತ್ರದ ಗೌರವಾಧ್ಯಕ್ಷ ರವಿಪ್ರಸನ್ನ ತಂತ್ರಿ ನಡುವಿನ ವಿವಾದ ಕೊಂಡಾಣ ಕ್ಷೇತ್ರದಲ್ಲಿ ತಪ್ಪುಕಾಣಿಕೆ ಹಾಕುವ ಮೂಲಕ ಅಂತ್ಯಗೊಂಡಿತ್ತು. ರವಿ ಪ್ರಸನ್ನ ಅವರು ಕೊಂಡಾಣ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿದ್ದು, ಇದರ ಬೆನ್ನಲ್ಲೇ ತಮ್ಮಣ್ಣ ಶೆಟ್ಟಿ ಕೂಡಾ ಬಾರೆಬೈಲ್‌ ಕ್ಷೇತ್ರಕ್ಕೆ ಆಗಮಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ತಾನು ದೈವದ ಮುಂದೆ ಪ್ರಾರ್ಥಿಸಿದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿ, ವಿಕೃತ ರೀತಿಯಲ್ಲಿ ಕಮೆಂಟ್‌ ಹಾಕುತ್ತಿರುವವರ ಬಗ್ಗೆ ತಮ್ಮಣ್ಣ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ಕೊಂಡಾಣ ಕ್ಷೇತ್ರದಲ್ಲಿ ವಿವಾದ ತಾರ್ಕಿಕ ಅಂತ್ಯಗೊಂಡಿದ್ದರೂ ಕೆಲವರು ಇದನ್ನು ಇನ್ನೂ ಜೀವಂತವಾಗಿ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರು ಅಷ್ಟು ಮಂದಿ ಕೊಂಡಾಣ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕುವಾಗ ನಾನು ಕೂಡ ಬಾರೆಬೈಲ್ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾನು ಕ್ಷೇತ್ರಕ್ಕೆ ಹೋಗಿ, ಅಲ್ಲಿ ಹೋಗಿ ದೈವಗಳಿಗೆ ಅಡ್ಡ ಬಿದ್ದು ಬಂದಿದ್ದೇನೆ.. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿರುವ ತಮ್ಮಣ್ಣ ಶೆಟ್ಟಿ ದೈವಗಳ ಎದುರು ಯಾರೂ ದೊಡ್ಡವರಲ್ಲ ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು, ದೈವಗಳ ಮುಂದೆ ನಮ್ಮ ಅಹಂ ಭಾವ ದೈವಗಳ ಎದುರು ತೋರಿಸಬಾರದು. ನಾನು ಮತ್ತು ರವಿಪ್ರಸನ್ನ ಸ್ನೇಹಿತರು. ನಮ್ಮ ನಡುವೆ ಯಾವುದೇ ವೈರತ್ವವಿಲ್ಲ. ದೈವಸ್ಥಾನಗಳಲ್ಲಿ ನೇಮ ಕಟ್ಟುವವರಿಂದ ಕಟ್ಟುಪಾಡು ಮುರಿಯಬಾರದು ನಮ್ಮ ಧಾರ್ಮಿಕ ನಂಬಿಕೆ ಅಧಪತನವಾಗಬಾರದು ಎಂಬ ನಿಟ್ಟಿನಲ್ಲಿ ವಿರೋಧ ಅಷ್ಟೇ. ಇದನ್ನು ಅವರಿಗೂ ತಿಳಿಹೇಳಿದ್ದೇನೆ.1 ನಾನು ಜಾರಂದಾಯನ ಎದುರು ಅಡ್ಡ ಬಿದ್ದಿದ್ದಕ್ಕೂ ಕೆಲವರು ಏಕವಚನ ಬಳಸಿ ತೀರಾ ಅಸಂಬದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಅವರನ್ನು ನಾನು ನಂಬಿರುವ ದೈವಗಳೇ ಸರಿದಾರಿಗೆ ತರಲಿ ಎಂದು ಪ್ರಾರ್ಥಿಸಿದ್ದಾಗಿ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.

error: Content is protected !!