‘ಕಿಲ್ಲರ್’ ಬಿಎಂಟಿಸಿ ಅಟ್ಟಹಾಸ- ಮಣಿಪುರದ ಯುವತಿ ಸ್ಪಾಟ್‌ ಡೆತ್

ಬೆಂಗಳೂರು: ದೂರದ ಮಣಿಪುರದಿಂದ ಸಾವಿರಾರು ಮೈಲು ದಾಟಿ, ಹೊಟ್ಟೆಪಾಡಿಗಾಗಿ ಈ ಸಿಲಿಕಾನ್ ಸಿಟಿಗೆ ಬಂದಿದ್ದ ಆ 20 ವರ್ಷದ ಹುಡುಗಿ ಹನ್ನಾ ಇನಕಾ, ತನ್ನ ಬದುಕು ಹೀಗೆ ಬಿಎಂಟಿಸಿ ಬಸ್ಸಿನ ಚಕ್ರದ ಕೆಳಗೆ ನುಜ್ಜುಗುಜ್ಜಾಗುತ್ತೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದು ಕೇವಲ ಅಪಘಾತವಲ್ಲ, ಬಿಎಂಟಿಸಿ ಚಾಲಕರ ಅಜಾಗರೂಕತೆಗೆ ಬಲಿಯಾಗಿತ್ತು ಮತ್ತೊಂದು ಮುಗ್ಧ ಜೀವ!

ನಿನ್ನೆ ಬೆಳಿಗ್ಗೆ ಗಂಟೆ ಹತ್ತಿರ ಹತ್ತಿರ ಹತ್ತು. ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ವಾಹನಗಳ ಭರಾಟೆ. ಹನ್ನಾ ತನ್ನ ಗೆಳೆಯನ ಬೈಕ್ ಹಿಂದೆ ಕುಳಿತು ಹೊರಟಿದ್ದಳು. ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿಗೆ ನುಗ್ಗಿ ಬರುತ್ತಿದ್ದ ಆ ಎಲೆಕ್ಟ್ರಿಕ್ ಬಸ್ ಅಕ್ಷರಶಃ ‘ಯಮಧರ್ಮರಾಯ’ನ ವಾಹನದಂತೆ ಇತ್ತು. ಚಾಲಕನ ಆ ಒಂದು ಕ್ಷಣದ ಅಜಾಗರೂಕತೆ, ಆ ರ‍್ಯಾಶ್ ಡ್ರೈವಿಂಗ್ ಬೈಕಿಗೆ ಟಚ್ ಆಯ್ತು. ಬ್ಯಾಲೆನ್ಸ್ ತಪ್ಪಿ ಹನ್ನಾ ಕೆಳಗೆ ಬಿದ್ದಿದ್ದೇ ತಡ, ಆ ದೈತ್ಯ ಬಸ್ಸಿನ ಮುಂಭಾಗದ ಚಕ್ರ ಆಕೆಯ ತಲೆಯ ಮೇಲೆ ಹರಿದು ಹೋಯಿತು! ಅಷ್ಟರಲ್ಲೇ ಹುಡುಗಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಪಘಾತವಾದ ಕೂಡಲೇ ಬಸ್ ಕೆಳಗಡೆ ಬಿದ್ದ ಯುವತಿಯನ್ನ ಕೆ.ಆರ್ ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಳು.

ಇತ್ತೀಚೆಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಹಾವಳಿ ಜಾಸ್ತಿಯಾಗಿದೆ. ಶಬ್ದವಿಲ್ಲದೆ ಬರುವ ಈ ಬಸ್‌ಗಳು ಯಾವಾಗ ಯಾರ ಪ್ರಾಣ ಹೀರುತ್ತವೋ ಎಂಬ ಭಯ ಬೆಂಗಳೂರಿಗರನ್ನು ಕಾಡುತ್ತಿದೆ. ಬಿಎಂಟಿಸಿ ಚಾಲಕರಿಗೆ ರಸ್ತೆಯಲ್ಲಿ ಹೋಗುವ ಬೈಕ್ ಸವಾರರು ಮನುಷ್ಯರಂತೆ ಕಾಣುವುದಿಲ್ಲವೋ ಅಥವಾ ಟಾರ್ಗೆಟ್ ಮುಟ್ಟುವ ತರಾತುರಿಯೋ ಗೊತ್ತಿಲ್ಲ. ಚಾಲಕರ ನಿರ್ಲಕ್ಷ್ಯಕ್ಕೆ ಇನ್ಯಷ್ಟು ಜನ ಬಲಿಯಾಗಬೇಕು? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

error: Content is protected !!