ರೈಲಿನ ಶೌಚಾಲಯ ಬಳಿ ಕುಳಿತು ಪ್ರಯಾಣಿಸಿದ ಯುವ ಕುಸ್ತಿಪಟುಗಳು!‌ ರಾಷ್ಟ್ರದ ಹೀರೋಗಳಿಗೆ ಅಮಾನವೀಯ ಅನುಭವ

ಭುವನೇಶ್ವರ್: ದೇಶದ ಕೀರ್ತಿಪತಾಕೆಯನ್ನು ಹಾರಿಸಬೇಕಾದ ಯುವ ಕುಸ್ತಿ ಪಟುಗಳು ಅಮಾನವೀಯ ಅನುಭವಕ್ಕೆ ಸಿಲುಕಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೋ ಒಂದು ವೈರಲ್‌ ಆಗಿ, ನಮ್ಮ ದೇಶದಲ್ಲಿ ಕ್ರೀಡಾಪಟುಗಳಿಗೆ ಸರಕಾರ ಎಷ್ಟು ಗೌರವ ಕೊಡುತ್ತಿದೆ ಎನ್ನುವುದು ಮತ್ತೊಮ್ಮೆ ಜಗಜಾಹೀರಾಗಿದೆ.

ಉತ್ತರ ಪ್ರದೇಶದಲ್ಲಿ ನಡೆದ 69ನೇ ರಾಷ್ಟ್ರೀಯ ಶಾಲಾ ಕುಸ್ತಿ ಚಾಂಪಿಯನ್‌ಶಿಪ್-ನಿಂದ ಓಡಿಶಾಕ್ಕೆ ಮರಳುತ್ತಿದ್ದ 18 ಯುವ ಕ್ರೀಡಾಪಟುಗಳು, ರೈಲಿನಲ್ಲಿ ಶೌಚಾಲಯದ ಬಳಿಯೇ ನೆಲದ ಮೇಲೆ ಕುಳಿತು ನೂರಾರು ಕಿಲೋಮೀಟರ್ ಪ್ರಯಾಣ ಮಾಡಬೇಕಾಯಿತು.

ಒಡಿಶಾದ ಶಾಲಾ ಶಿಕ್ಷಣ ಮತ್ತು ಸಮೂಹ ಶಿಕ್ಷಣ ಇಲಾಖೆ ಮೂಲಕ ಸ್ಪರ್ಧೆಗೆ 10 ಹುಡುಗರು ಮತ್ತು 8 ಹುಡುಗಿಯರ ತಂಡ ತೆರಳಿದ್ದರೂ, ಕ್ರೀಡಾಪಟುಗಳಿಗೆ ಮುಂಗಡ ಕಾಯ್ದಿರಿಸಲು (Reserved Ticket) ವ್ಯವಸ್ಥೆಯನ್ನು ಸರಿಯಾಗಿ ಜಾರಿ ಮಾಡಲಾಗಲಿಲ್ಲ. ಆದರೂ ಸ್ಪರ್ಧೆಗೆ ತೆರಳಲೇಬೇಕಿದ್ದ ಅನಿವಾರ್ಯತೆಗೆ ಸಿಲುಕಿದ್ದ ಪ್ರತಿಭಾವಂತ, ಶ್ರದ್ಧಾವಂತ ಯುವ ಪ್ರತಿಭೆಗಳು, ಅಸಹನೀಯವಾಗಿ, ನೋವು–ಅಸಹ್ಯ ಅನುಭವವನ್ನು ಲೆಕ್ಕಿಸದೇ ಶೌಚಾಲಯದ ಪಕ್ಕದಲ್ಲಿಯೇ ಕುಳಿತು ಪ್ರಯಾಣಿಸಬೇಕಾಯಿತು.

ಸಾರ್ವಜನಿಕರು, ಕ್ರೀಡಾಪ್ರೇಮಿಗಳು ಮತ್ತು ಯುವಕರ ಕುಟುಂಬಗಳು ಈ ದೃಶ್ಯವನ್ನು ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವ ನಿತ್ಯಾನಂದ ಗೊಂಡ್ ಈ ಘಟನೆ ಕುರಿತು ಪ್ರತಿಕ್ರಿಯಿಸಿ, “ಇದು ಗಂಭೀರ ವಿಚಾರ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಈ ಘಟನೆಯು ಕೇವಲ ಟಿಕೆಟ್ ವ್ಯವಸ್ಥೆಯ ವೈಫಲ್ಯವಲ್ಲ; ಅದು ಪ್ರತಿಭಾಶಾಲಿ ಯುವ ಕ್ರೀಡಾಪಟುಗಳಿಗೆ ಮಾಡಿದ ಘೋರ ಅವಮಾನ. ರಾಜ್ಯ ಮತ್ತು ಸಂಸ್ಥೆಗಳು ಕ್ರೀಡಾಪಟುಗಳ ಮೇಲೆ ತೋರಿದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ.

error: Content is protected !!