ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ–48 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೋರ್ಲಾತ್ ಕ್ರಾಸ್ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ದುರಂತ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಟ್ರಕ್‌ಗೆ ಢಿಕ್ಕಿ ಹೊಡೆದು ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದ ಪರಿಣಾಮ 9 ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಮುಂದುವರಿದಿದೆ. ಲಾರಿ ಚಾಲಕನ ಕ್ಷಣ ಹೊತ್ತಿನ ತೂಕಡಿಕೆಗೆ ಬಸ್ ಬೆಂಕಿಯುಂಡೆಯಾಗಿ ಈ ಭೀಕರ ದುರಂತ ಸಂಭವಿಸಿದೆ.
ಈ ಮಧ್ಯೆ ಸ್ಲೀಪರ್ ಕೋಚ್‌ಗಳು ಎಷ್ಟು ಸುರಕ್ಷಿತ ಎನ್ನುವುದು ಮತ್ತೊಮ್ಮೆ ಗಾಢವಾಗಿ ಕಾಡಲಾರಂಭಿಸಿದೆ.
KA 01 AE 5217 ನಂಬರಿನ ಖಾಸಗಿ ಸೀಬರ್ಡ್ ಕಂಪೆನಿ ಬಸ್ ಹಾಗೂ HR 38, AB 3455 ನಂಬರಿನ ಕಂಟೇನರ್ ಲಾರಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭಿಸಿದೆ.
ಘಟನೆಯ ವಿವರ: ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್, ಹಿರಿಯೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಟ್ರಕ್‌ನೊಂದಿಗೆ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಢಿಕ್ಕಿ ಹೊಡೆದಿದೆ. ಪ್ರಾಥಮಿಕ ಮಾಹಿತಿಯಂತೆ, ಟ್ರಕ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ಹಾರಿ ಎದುರಿನಿಂದ ಬಂದ ಬಸ್ ನ ಡಿಸೇಲ್ ಟ್ಯಾಂಕ್ ಇದ್ದ ಭಾಗಕ್ಕೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದ ಟ್ಯಾಂಕ್ ಹೊಡೆದು ಬಸ್‌ಗೆ ಬೆಂಕಿ ಹತ್ತಿದ್ದು, ಬಸ್ ರಸ್ತೆಯ ಮಧ್ಯದಲ್ಲೇ ಹೊತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು.

ಸ್ಲೀಪರ್ ಕೋಚ್ ಆಗಿದ್ದ ಕಾರಣ ಹೆಚ್ಚಿನ ಪ್ರಯಾಣಿಕರು ನಿದ್ರಾವಸ್ಥೆಯಲ್ಲಿದ್ದರು. ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಡೀಸೆಲ್ ಟ್ಯಾಂಕ್ ಬಳಿಯೇ ಲಾರಿ ಗುದ್ದಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದ್ದು, ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಉಳಿದ 18 ಪ್ರಯಾಣಿಕರು ಕಿಟಕಿ ಹಾಗೂ ಎಮರ್ಜೆನ್ಸಿ ಡೋರ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ವೇಗವಾಗಿ ವ್ಯಾಪಿಸಿದ ಕಾರಣ ಅನೇಕರು ಹೊರಬರಲು ಸಾಧ್ಯವಾಗದೆ ಸಜೀವ ದಹನಗೊಂಡಿದ್ದಾರೆ. ಬೆಳಿಗ್ಗೆ 8 ಗಂಟೆಯ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಬಸ್‌ನ ಅವಶೇಷಗಳಿಂದ ಒಂಬತ್ತು ಶವಗಳನ್ನು ಹೊರತೆಗೆದಿದ್ದಾರೆ. ಉಳಿದವರ ಪತ್ತೆ ಕಾರ್ಯ ಮುಂದುವರಿದಿದೆ.

ಅಪಘಾತಕ್ಕೀಡಾದ ಬಸ್‌ನಲ್ಲಿ 32 ಸೀಟುಗಳಿದ್ದು, 15 ಮಹಿಳೆಯರು ಮತ್ತು 14 ಪುರುಷರು ಸೇರಿ ಒಟ್ಟು 29 ಪ್ರಯಾಣಿಕರು ಇದ್ದರು. ಇವರಲ್ಲಿ ಹೆಚ್ಚಿನವರು ಗೋಕರ್ಣದವರು. ಕೆಲವರು ಕುಮಟಾ ಹಾಗೂ ಶಿವಮೊಗ್ಗ ಮೂಲದವರಾಗಿದ್ದಾರೆ. ಅಪಘಾತದ ವೇಳೆ ಬಸ್ ಚಾಲಕ, ಕಂಡಕ್ಟರ್ ಸೇರಿದಂತೆ ಸಿಬ್ಬಂದಿ ಬಸ್‌ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಟ್ರಕ್ ಚಾಲಕ ಮೃತಪಟ್ಟಿದ್ದು, ಆತನನ್ನು ಕುಲದೀಪ್ ಎಂದು ಗುರುತಿಸಲಾಗಿದೆ. ಈತನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬಸ್‌ನಲ್ಲಿದ್ದರು 28 ಮಂದಿ
ಬಸ್‌ನಲ್ಲಿ ಒಟ್ಟು 28 ಪ್ರಯಾಣಿಕರಿದ್ದು, ಈ ಪೈಕಿ 24 ಮಂದಿ ಗೋಕರ್ಣಕ್ಕೆ, ತಲಾ ಇಬ್ಬರು ಕುಮಟಾ ಹಾಗೂ ಶಿವಮೊಗ್ಗಕ್ಕೆ ಹೊರಟಿದ್ದರು. ಗೋಕರ್ಣಕ್ಕೆ ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಹೆಚ್ ವಿ, ದಿಲೀಪ್, ಪ್ರೀತಿಸ್ವರನ್, ಬಿಂದು ವಿ, ಕವಿತಾ ಕೆ, ಅನಿರುದ್ಧ್ ಬ್ಯಾನರ್ಜಿ, ಅಮೃತಾ, ಈಶಾ, ಶಶಿಕಾಂತ್ ಎಂ, ನವ್ಯಾ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ, ದೇವಿಕಾ ಎಚ್, ಗಗನಶ್ರೀ ಎಸ್, ರಸ್ಮಿ ಮಹಲೆ, ರಕ್ಷಿತಾ ಆರ್, ಸೂರಜ್, ಮಾನಸ, ಮಲ್ಲಣ್ಣ ಮತ್ತು ಹೇಮರಾಜ್ ಕುಮಾರ್ ಎಂಬವರು ಹೊರಟಿದ್ದರು. ಕುಮಟಾಕ್ಕೆ ಮೇಘರಾಜ್ ಹಾಗೈ ವಿಜಯ್ ಭಂಡಾರಿ ಮತ್ತು ಶಿವಮೊಗ್ಗಕ್ಕೆ ಮಸ್ರತುನ್ನಿಸಾ ಎಸ್ ಎನ್ ಹಾಗೂ ಸೈಯದ್ ಜಮೀರ್ ಗೌಸ್ ಎಂಬ ಮಾಹಿತಿ ಲಭಿಸಿದೆ. ಗಾಯಾಳುಗಳನ್ನು ಹೊರತುಪಡಿಸಿ, ಬಿಂದು, ಮಾನಸ, ನವ್ಯ, ನಸ್ರತ್ ಹುನ್ನಿಸಾ, ಸೈಯದ್ ಜಮೀರ್ ಹಾಗೂ ರಶ್ಮಿ ಇವರ ಸುಳಿವು ಸಿಕ್ಕಿಲ್ಲ.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರಿಂದ ಕಾರ್ಯಾಚರಣೆ ತೀವ್ರ ಸವಾಲಾಗಿ ಪರಿಣಮಿಸಿತು. ಅಪಘಾತದ ಪರಿಣಾಮ ಸುಮಾರು 30 ಕಿಲೋಮೀಟರ್‌ಗಳಷ್ಟು ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳನ್ನು ಶಿರಾವರ ಮಾರ್ಗದ ಮೂಲಕ ವಳವಡಿಸಲಾಗಿದೆ.
ಹಲವರು ಗಂಭೀರ- ವಿವಿಧ ಆಸ್ಪತ್ರೆಗೆ ದಾಖಲು

ಎಸ್‌ಪಿ ರಂಜಿತ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಯ ಮೇಲ್ವಿಚಾರಣೆ ನಡೆಸಿದ್ದು, ಹಿರಿಯೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳಲ್ಲಿ 12 ಮಂದಿಯನ್ನು ಹಿರಿಯೂರು ಆಸ್ಪತ್ರೆಗೆ, 9 ಮಂದಿಯನ್ನು ತುಮಕೂರಿನ ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಗೆ ದಾಖಲಾದ ಓರ್ವ ವ್ಯಕ್ತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. ಯಾಕೆಂದರೆ ಆತ ಶೆಕಡಾ 15 ರಿಂದ 20 ರಷ್ಟು ಸುಟ್ಟು ಹೋಗಿದ್ದಾನೆ ಎಂಬ ಮಾಹಿತಿ ಇದೆ. ವಿಕ್ಟೋರಿ ಆಸ್ಪತ್ರೆಗೆ ದಾಖಲಾಗಿರೋರನ್ನು ಬಿಟ್ಟು ಉಳಿದೆಲ್ಲ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ಮಗುವಿನ ಕಳೆಬರ ರೀತಿಯಲ್ಲಿ ಸಿಕ್ಕಿದೆ. ಅದನ್ನ ವೈದ್ಯಕೀಯ ಪರೀಕ್ಷೆ ಕಳುಹಿಸಿ ಪತ್ತೆ ಹಚ್ಚಲಾಗುವುದು. ಈಗಾಗಲೇ ನಮ್ಮ ಎಲ್ಲ ತನಿಖಾ ತಂಡಗಳು ಇಲ್ಲಿಗೆ ಆಗಮಿಸಿವೆ. ಬೆಂಗಳೂರಿನಿಂದ ಡಿಎನ್ಎ ಪರೀಕ್ಷಾ ತಂಡ ಕೂಡ ಬಂದಿದೆ ಎಂದು ಎಸ್‌ಪಿ ರಂಜಿತ್ ಮಾಹಿತಿ ನೀಡಿದ್ದಾರೆ.

ಮೋದಿ ಸಂತಾಪ:
ಘಟನೆಯ ಕುರಿತು ಪ್ರಧಾನಿ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಪ್ರತಿಯೊಬ್ಬರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ನೀಡಲಾಗುವುದು ಎಂದು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ‘ಎಕ್ಸ್’ನಲ್ಲಿ, ಕ್ರಿಸ್‌ಮಸ್ ರಜೆಗೆ ತಮ್ಮ ಊರಿಗೆ ತೆರಳುತ್ತಿದ್ದವರ ಪ್ರಯಾಣ ಇಂತಹ ಭೀಕರ ದುರಂತದಲ್ಲಿ ಅಂತ್ಯಗೊಂಡಿರುವುದು ಹೃದಯವಿದ್ರಾವಕ ಎಂದು ಹೇಳಿ, ಅಪಘಾತದ ಕಾರಣ ಪತ್ತೆಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
/newsfirstprime/media/media_files/2025/12/25/chitradurga-district-between-hiriyuru-sira-seabird-bus-accident_massive-bus-tragedy_11-2025-12-25-07-49-53-2025-12-25-09-11-11.webp)
ತಮಿಳುನಾಡಲ್ಲೂ ಭೀಕರ ದುರಂತ- 9 ಸಾವು
ಇದರ ನಡುವೆಯೇ, ಬುಧವಾರ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲೂ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿರುವುದು ರಸ್ತೆ ಸುರಕ್ಷತೆ ಕುರಿತ ಗಂಭೀರ ಪ್ರಶ್ನೆಗಳನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ತಿರುಚಿರಾಪಳ್ಳಿಯಿಂದ ಚೆನ್ನೈಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಬಸ್ ವಿರುದ್ಧ ದಿಕ್ಕಿನ ವಾಹನಗಳಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ಎರಡೂ ದುರಂತಗಳು ಸಾರ್ವಜನಿಕ ಮನಸ್ಸಿನಲ್ಲಿ ಆಳವಾದ ನೋವು ಮೂಡಿಸಿದ್ದು, ಹೆದ್ದಾರಿಗಳಲ್ಲಿನ ಭಾರೀ ವಾಹನಗಳ ನಿಯಂತ್ರಣ ಹಾಗೂ ಪ್ರಯಾಣಿಕರ ಸುರಕ್ಷತೆ ಕುರಿತು ತಕ್ಷಣದ ಕ್ರಮಗಳ ಅಗತ್ಯತೆಯನ್ನು ನೆನಪಿಸಿವೆ.

ಸ್ಲೀಪರ್ ಕೋಚ್‌ಗಳು ಎಷ್ಟು ಸುರಕ್ಷಿತ?
ಚಿತ್ರದುರ್ಗ ಭೀಕರ ದುರಂತವು ಸ್ಲೀಪರ್ ಕೋಚ್‌ಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟಿಸಿದೆ. ಬಸ್‌ಗಳನ್ನು ತನಗೆ ಬೇಕಾದಂತೆ ಅನಧಿಕೃತವಾಗಿ ವಿನ್ಯಾಸ ಬದಲಾವಣೆ ಮಾಡುವುದು, ಹಾಳಾದ ವಿದ್ಯುತ್ ವ್ಯವಸ್ಥೆ, ಒಳಭಾಗದ ಬಿಡಿಭಾಗಗಳ ನಿರ್ವಹಣೆ ಕೊರತೆ ಮತ್ತು ಪ್ರಮುಖವಾಗಿ ಇಮರ್ಜೆನ್ಸಿ ಎಕ್ಸಿಟ್‌ಗಳ ಕೊರತೆ, ಬಸ್‌ನಲ್ಲಿ ಎಮೆರ್ಜೆನ್ಸಿ ಸೇಫ್ಟಿ ಸಾಧನಗಳಿಲ್ಲದಿರುವುದು, ಬೆಂಕಿಗೆ ಸುಲಭವಾಗಿ ತುತ್ತಾಗುವ ವಸ್ತುಗಳನ್ನು ಬಳಸುವುದು, ಈ ಎಲ್ಲ ಗಂಡಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ. ಸ್ಲೀಪರ್ ಕೋಚ್‌ಗಳು ಸರ್ಕಾರದ ಮಾನದಂಡಗಳನ್ನು ಪಾಲಿಸದೆ ತನಗೆ ಬೇಕಾದಂತೆ ಬಸ್‌ಗಳನ್ನು ವಿನ್ಯಾಸಗೊಳಿಸುವುದು ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
2025 ಅಕ್ಟೋಬರ್‌ನಲ್ಲಿ ಜೈಸಲ್ಮೇರ್‌ನಲ್ಲಿ 26 ಮಂದಿ, ಕುಣೂಲ (ಆಂಧ್ರಪ್ರದೇಶ)ದಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಪ್ರಯಾಣಿಕರು ನಿದ್ದೆಯಲ್ಲಿದ್ದಾಗ ಸಂಭವಿಸಿದ್ದು, ಬಸ್‌ನಲ್ಲಿ ಹೊರಬರಲಾರದೆ ದಿಗ್ಬಂಧನಗೊಂಡು ಸಾವು ಸಂಭವಿಸಿದೆ. ದೇಶದ ಹಲವು ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 100ಕ್ಕೂ ಹೆಚ್ಚು ಸಾವುಗಳು ಸ್ಲೀಪರ್ ಕೋಚ್ ಬೆಂಕಿ ಪ್ರಕರಣಗಳಿಂದ ಸಂಭವಿಸಿವೆ.
ನಿಯಮಗಳಿದ್ದರೂ ಜಾರಿಗೆ ಕಡಿಮೆ, ಪರಿಶೀಲನೆ ಅನ್ಯಾಯ, ಸುರಕ್ಷತಾ ಸಾಧನಗಳ ಕೊರತೆ, ದುರ್ಬಲ ಬಾಡಿ ವಿನ್ಯಾಸಗಳಿರುವುದರಿಂದ ಅಪಾಯ ಹೆಚ್ಚಾಗಿದೆ. ಆದ್ದರಿಂದ, ಸಮಗ್ರ ಪರಿಶೀಲನೆ, ಕಠಿಣ ನಿಯಂತ್ರಣ ಮತ್ತು ಪ್ರಮಾಣೀಕೃತ ಮಾನದಂಡಗಳ ಅನುಸರಣೆ ಇಲ್ಲದಿದ್ದರೆ ಇಂತಹ ದುರಂತಗಳು ಮರುಕಳಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.