ಒಡಿಯೂರಿನಲ್ಲಿ ತುಳುನಾಡ ಜಾತ್ರೆ ಅಂಗವಾಗಿ ಬೀದಿ ನಾಟಕ ಸ್ಪರ್ಧೆ: ಭಾಗವಹಿಸುವ ತಂಡಗಳಿಗೆ ಷರತ್ತುಗಳೇನು?

ಮಂಗಳೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜನವರಿ 27 ಮತ್ತು 28, 2026 ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಈ ಸಂದರ್ಭದಲ್ಲಿ ಜನವರಿ 27 ರಂದು ವಂದೇ ಮಾತರಂ ಹಾಡಿಗೆ 150 ವರ್ಷ ಸ್ಮರಣಾರ್ಥ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನ 26ನೇ ಸಮ್ಮೇಳನವಾಗಿ ನಡೆಯಲಿದೆ. ಅದೇ ರೀತಿ ಈ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಡಿಯೂರು ಬೀದಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಯೋಜಕ ಕದ್ರಿ ನವನೀತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.


ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸ್ಪರ್ಧೆಯಲ್ಲಿ ಶಾಲೆ, ಕಾಲೇಜು, ಮಂಡಳಿ, ಬಳಗ ಮತ್ತು ಸಂಘಗಳ ತಂಡಗಳು ಭಾಗವಹಿಸಬಹುದು. ಪ್ರತಿ ತಂಡ 10–15 ಸದಸ್ಯರಿರಬಹುದು ಮತ್ತು ನಟನೆ ಹಾಗೂ ಸಂಗೀತ ಸೇರಿ ಪ್ರದರ್ಶನ ನೀಡಬಹುದು. ಕನ್ನಡ ಅಥವಾ ತುಳು ಭಾಷೆಯಲ್ಲಿ 10 ನಿಮಿಷ ಪ್ರದರ್ಶನ + 2 ನಿಮಿಷ ಸಿದ್ಧತಾ ಅವಧಿ ಇರುತ್ತದೆ ಎಂದರು.

ಸಂಗೀತ ಪರಿಕರಗಳು, ರಂಗ ಪರಿಕರಗಳು ಮತ್ತು ವೇಷಭೂಷಣಗಳ ಬಳಕೆ ಅನುಮತಿಸಲಾಗಿದೆ. ಯಾವುದೇ ಜಾತಿ, ಧರ್ಮ, ಪಂಗಡ ಅಥವಾ ಲಿಂಗ ನಿಂದನೆಗೆ ಅವಕಾಶವಿಲ್ಲ ಮತ್ತು ಅಸಭ್ಯ ವರ್ತನೆ/ಭಾಷೆ ಬಳಕೆಯಾದಲ್ಲಿ ತಂಡವನ್ನು ತಕ್ಷಣವೇ ಅನರ್ಹಗೊಳಿಸಲಾಗುವುದು. ಸ್ಪರ್ಧೆಯ ಮೊದಲ ಸುತ್ತು 2–3 ಸ್ಥಳಗಳಲ್ಲಿ ನಡೆಯಲಿದೆ. ಅಂತಿಮ ಸುತ್ತು ಒಡಿಯೂರಿನಲ್ಲಿ ನಡೆಯುತ್ತಿದ್ದು, ಆಯ್ಕೆಯಾದ ತಂಡಗಳಿಗೆ ಪೂರ್ಣ ಸ್ಪರ್ಧಾ ಮಾಹಿತಿ ನೀಡಲಾಗುತ್ತದೆ. ಪ್ರತಿಯೊಂದು ತಂಡಕ್ಕೂ 2,000/- ರೂ. ಗೌರವಧನ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಒಡಿಯೂರು ರಥೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ ಉಪಸ್ಥಿತರಿದ್ದು, ತುಳುನಾಡಿನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಂಸ್ಕೃತಿಕ ಚಟುವಟಿಕೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

error: Content is protected !!