ಪತ್ತನಂತಿಟ್ಟ: ಮಂಡಲ ತೀರ್ಥಯಾತ್ರೆಯ ಋತು ಮುಕ್ತಾಯದ ಹಂತಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಡಿಸೆಂಬರ್ 26 ಮತ್ತು 27 ರಂದು ದೇವಾಲಯ ಪ್ರವೇಶಕ್ಕೆ ಮಿತಿ ಹೇರಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ.

ಡಿ.26 ರಂದು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ 30,000 ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಇದಲ್ಲದೆ, ಸ್ಪಾಟ್ ಬುಕಿಂಗ್ ಮೂಲಕ 2,000 ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಡಿ.27 ರಂದು ಮಂಡಲ ಪೂಜೆ ನಡೆಯಲಿದ್ದು, ಆ ದಿನ ವರ್ಚುವಲ್ ಕ್ಯೂ ಮೂಲಕ 35,000 ಭಕ್ತರು ದರ್ಶನ ಕಾಯ್ದಿರಿಸಿಕೊಳ್ಳಬಹುದು. ಸ್ಪಾಟ್ ಬುಕಿಂಗ್ 2,000ಕ್ಕೆ ಸೀಮಿತಗೊಳಿಸಲಾಗಿದ್ದು, ಒಟ್ಟು ಯಾತ್ರಾರ್ಥಿಗಳ ಸಂಖ್ಯೆ 37,000ಕ್ಕೆ ಮಿತಿಗೊಳಿಸಲಾಗಿದೆ.
ಇನ್ನೊಂದೆಡೆ, ಮಕರವಿಳಕ್ಕು ಉತ್ಸವದ ಸಿದ್ಧತೆಗಳ ಭಾಗವಾಗಿ ಡಿ.26 ರಂದು ಅರಣ್ಮುಲದ ಶ್ರೀ ಪಾರ್ಥಸಾರಥಿ ದೇವಸ್ಥಾನದಿಂದ ಹೊರಟ ಥಂಕ ಅಂಕಿ (ಅಯ್ಯಪ್ಪ ದೇವರ ಚಿನ್ನದ ವಸ್ತ್ರ) ಮೆರವಣಿಗೆ ಮಧ್ಯಾಹ್ನ ವೇಳೆಗೆ ಶಬರಿಮಲೆ ಸನ್ನಿಧಾನಂ ತಲುಪಲಿದೆ. ಈ ಹಿನ್ನೆಲೆಯಲ್ಲಿ ಮೆರವಣಿಗೆಯ ಸಮಯದಲ್ಲಿ ಪಂಪಾದಲ್ಲಿ ಯಾತ್ರಾರ್ಥಿಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಮೆರವಣಿಗೆ ಸನ್ನಿಧಾನಂ ತಲುಪಿದ ಬಳಿಕವೇ ಭಕ್ತರಿಗೆ ಬೆಟ್ಟದ ದೇಗುಲಕ್ಕೆ ಪಾದಯಾತ್ರೆ ಮಾಡಲು ಅವಕಾಶ ನೀಡಲಾಗುತ್ತದೆ.
ಡಿ.26 ರಂದು ಸಂಜೆ ದೀಪಾರಾಧನೆಗೂ ಮುನ್ನ ಥಂಕ ಅಂಕಿ ಸನ್ನಿಧಾನಂ ತಲುಪಲಿದ್ದು, ದೇವಾಲಯದ ತಂತ್ರಿ ಹಾಗೂ ಮೇಲ್ಸಂತಿ ಜಂಟಿಯಾಗಿ ಚಿನ್ನದ ವಸ್ತ್ರವನ್ನು ಸ್ವೀಕರಿಸಿ ಅಯ್ಯಪ್ಪನ ವಿಗ್ರಹಕ್ಕೆ ಅಲಂಕರಿಸಲಿದ್ದಾರೆ. ಈ ಅಂಕಿ ಅಲಂಕಾರದಲ್ಲಿ ಡಿ.27ರ ಮಧ್ಯಾಹ್ನ ಮಂಡಲ ಪೂಜೆ ನೆರವೇರಲಿದೆ.
ಸುಮಾರು ಎರಡು ತಿಂಗಳ ಕಾಲ ನಡೆಯುವ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತಕ್ಕೆ ಮಂಡಲ ಪೂಜೆಯೊಂದಿಗೆ ತೆರೆ ಬೀಳಲಿದೆ. ಮಂಡಲ ಋತು ಅಂತ್ಯದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಸೋಮವಾರ ಒಂದು ಲಕ್ಷಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಸುಮಾರು 80,000 ಯಾತ್ರಾರ್ಥಿಗಳು ದರ್ಶನ ಪಡೆದಿದ್ದಾರೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.