ದುಬೈ: ಭಾರತ ತಂಡದ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ 737 ಅಂಕ ಪಡೆದು ಐಸಿಸಿ ಮಹಿಳಾ ಕ್ರಿಕೆಟ್ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ವಿಶ್ವದ ನಂ.1 ಟಿ20 ಬೌಲರ್ ಆಗಿದ್ದಾರೆ.ಆದರೆ, ಸ್ಮೃತಿ ಮಂಧಾನ ತಮ್ಮ ಏಕದಿನ ಅಗ್ರಸ್ಥಾನವನ್ನು ಕಳೆದುಕೊಂಡಿದ್ದು, ಲಾರಾ ವೋಲ್ವಾರ್ಡ್ಟ್ ನಂ.1 ಪಟ್ಟಕ್ಕೇರಿದ್ದಾರೆ. ಜೆಮಿಮಾ ರೊಡ್ರಿಗಸ್ T20 ಬ್ಯಾಟರ್‌ಗಳ ಟಾಪ್ 10 ಪ್ರವೇಶಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದಿದ್ದ ದೀಪ್ತಿ, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಡೆದುಕೊಂಡಿರುವ ವೋಲ್ವಾರ್ಡ್ಟ್, ಸ್ಮೃತಿ ಮಂಧಾನ ಅವರನ್ನು ಹಿಂದಿಕ್ಕಿ ನಂ. 1 ಸ್ಥಾನವನ್ನು ಅಲಂಕರಿಸಿದ್ದಾರೆ. ವಾಸ್ತವವಾಗಿ ಲಾರಾ ವೋಲ್ವಾರ್ಡ್ಟ್ ಈ ಹಿಂದೆಯೂ ಈ ಸ್ಥಾನವನ್ನು ಅಲಂಕರಿಸಿದ್ದರು.

ಶ್ರೀಲಂಕಾ ವಿರುದ್ಧದ ಅಜೇಯ ಅರ್ಧಶತಕ ಬಾರಿಸಿದ್ದ ಜೆಮಿಮಾ ರೊಡ್ರಿಗಸ್ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಐದು ಸ್ಥಾನಗಳ ಜಿಗಿತದೊಂದಿಗೆ ಅಗ್ರ 10 ರಲ್ಲಿ ಅಂದರೆ ಒಂಬತ್ತನೇ ಸ್ಥಾನಕ್ಕೇರಿದ್ದಾರೆ. ಅವರೊಂದಿಗೆ ಸ್ಮೃತಿ ಮಂಧಾನ ಮೂರನೇ ಸ್ಥಾನದಲ್ಲಿ ಮತ್ತು ಶಫಾಲಿ ವರ್ಮಾ ಹತ್ತನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಬೌಲಿಂಗ್‌ನಲ್ಲಿ, ಅರುಂಧತಿ ರೆಡ್ಡಿ ಕೂಡ ಐದು ಸ್ಥಾನಗಳ ಏರಿಕೆಯಾಗಿ 36 ನೇ ಸ್ಥಾನಕ್ಕೆ ತಲುಪಿದ್ದಾರೆ.