ಮಂಗಳೂರು: ನಮೋ ಖೇಲ್ ಸರಣಿ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಗುರುವಾರ(ಡಿ.25) ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹ ಹಾಗೂ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ಜಿಲ್ಲೆಯಲ್ಲಿ ನ. 23 ರಿಂದ ಈ ಸಂಸದ್ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾ ಮಹೋತ್ಸವದಲ್ಲಿ ಚೆಸ್, ಕಬ್ಬಡ್ಡಿ, ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮುಂತಾದ ಸ್ಪರ್ಧೆಗಳು ನಡೆದಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಮಕ್ಕಳು, ಮಹಿಳೆಯರು ಯುವಕರು ಸೇರಿ ಸಾವಿರಾರು ಕ್ರೀಡಾಸಕ್ತರು ಆಸಕ್ತರು ಈ ಮಹೋತ್ಸವದಲ್ಲಿ ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ.
ಇದೀಗ ಈ ಕ್ರೀಡೋತ್ಸವದ ಸಮಾರೋಪವು ಭಾರತದ ಹೆಮ್ಮೆಯ ಪುತ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದೇ ಆಯೋಜಿಸಲಾಗಿದೆ. ಅದರಂತೆ, ಗುರುವಾರ(ಡಿ.25) ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಈ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂದಾಜು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಮೋದಿ ಅವರ ಈ ಲೈವ್ ಕಾರ್ಯಕ್ರಮದಲ್ಲಿ ಯು ಎಸ್ ಮಲ್ಯ ಕ್ರೀಡಾಂಗಣದಲ್ಲಿ ನಡೆಯುವ ಸಮಾರೋಪದ ದೃಶ್ಯಗಳೂ ಪ್ರಸಾರವಾಗಲಿದೆ. ಆ ಮೂಲಕ ಪ್ರಧಾನಿ ಮೋದಿ ಅವರು ದೇಶದಾದ್ಯಂತ ಇರುವ ಕ್ರೀಡಾಪಟುಗಳಿಗೆ ಮತ್ತು ಯುವಜನತೆಗೆ ಸ್ಫೂರ್ತಿಯ ಮಾತುಗಳನ್ನು ಆಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಜಿಲ್ಲೆಯ ಸಮಸ್ತ ನಾಗರಿಕರು ಆ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ನುಡಿದರು.