ಮಂಗಳೂರು: ಪದವಿ ಪೂರ್ವ ವಿಭಾಗದ 19 ವರ್ಷ ವಯೋಮಾನದ ಬಾಲಕ ಹಾಗೂ ಬಾಲಕಿಯರ ರಾಷ್ಟ್ರಮಟ್ಟದ ನೆಟ್‌ಬಾಲ್ ಪಂದ್ಯಾಟವು ಡಿಸೆಂಬರ್ 25ರಿಂದ 30, 2025ರವರೆಗೆ ವಾಮಂಜೂರಿನ ಪಿಲಿಕುಲದ ಸ್ಕೌಟ್ ಅಂಡ್ ಗೈಡ್ಸ್ ಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದಕ್ಷಿಣ ಕನ್ನಡ ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಎಡಪದವು ಇವರ ಜಂಟಿ ಆಶ್ರಯದಲ್ಲಿ ಪಂದ್ಯಾಟ ಆಯೋಜಿಸಲಾಗಿದೆ ಎಂದರು.

ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ತಂಡಗಳ ಸುಮಾರು 1350ಕ್ಕೂ ಅಧಿಕ ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು, ನಿರ್ಣಾಯಕರು, ಸ್ವಯಂಸೇವಕರು ಹಾಗೂ ಅಧಿಕಾರಿಗಳು ಸೇರಿ ಒಟ್ಟು 2000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲರಿಗೂ ವಸತಿ, ಊಟೋಪಚಾರ (ವೆಜ್ ಹಾಗೂ ನಾನ್‌ವೆಜ್) ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಡಿ.25ರಂದು ಸಂಜೆ 3 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅಧ್ಯಕ್ಷತೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ, ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ಪಥಸಂಚಲನ ಗೌರವ ಸ್ವೀಕಾರ ನಡೆಯಲಿದೆ ಎಂದು ಹೇಳಿದರು.

ಪಂದ್ಯಾಟವು ಲೀಗ್ ಹಾಗೂ ನಾಕ್‌ಔಟ್ ಹಂತಗಳಲ್ಲಿ ನಡೆಯಲಿದ್ದು, ಡಿ.29ರಂದು ಫೈನಲ್ ಪಂದ್ಯ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ಪಂದ್ಯಾಟದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಮಹಿಳಾ ತಂಡ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಭರತ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಗೋಪಾಲ ಕಾರಂತ, ದೈಹಿಕ ಶಿಕ್ಷಣ ಉಪನ್ಯಾಸಕರು, ಆಡಳಿತಾಧಿಕಾರಿ ಪ್ರೇಮನಾಥ ಶೆಟ್ಟಿ ಬಿಎ, ಪ್ರಾಂಶುಪಾಲೆ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.