ಕ್ರಿಸ್‌ಮಸ್: ಸತ್ಯ, ಪಾರದರ್ಶಕತೆ ಹಾಗೂ ನೈತಿಕ ಜೀವನಕ್ಕೆ ಕರೆ:  ಸಮಾಜದಲ್ಲಿ ಶಾಂತಿ–ಸೌಹಾರ್ದ ಮರುಸ್ಥಾಪನೆ ಅಗತ್ಯ: ಡಾ. ಪೀಟರ್ ಪಾವ್ ಸಲ್ದಾನ್ಹಾ

ಮಂಗಳೂರು: ಕ್ರಿಸ್‌ಮಸ್ ಹಬ್ಬವು ಪ್ರೀತಿ, ಶಾಂತಿ ಹಾಗೂ ಮಾನವೀಯತೆಯ ಶಾಶ್ವತ ಮೌಲ್ಯಗಳನ್ನು ಸ್ಮರಿಸುವ ಜೊತೆಗೆ ಸಮಾಜದಲ್ಲಿ ಸತ್ಯ, ನ್ಯಾಯ ಮತ್ತು ಸಹಜೀವನವನ್ನು ಮರುಸ್ಥಾಪಿಸುವ ಮಹತ್ವದ ಅವಕಾಶವಾಗಿದೆ ಎಂದು ಮಂಗಳೂರು ಕಥೊಲಿಕ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ ಸಲ್ದಾನ್ಹಾ ತಿಳಿಸಿದ್ದಾರೆ.

ಕ್ರಿಸ್‌ಮಸ್ ಸಂದೇಶದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹಿಂಸೆ, ವಂಚನೆ, ತಪ್ಪು ಮಾಹಿತಿ ಮತ್ತು ಪರಸ್ಪರ ಅವಿಶ್ವಾಸ ಹೆಚ್ಚುತ್ತಿರುವುದು ಚಿಂತಾಜನಕ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾರ್ವಜನಿಕ ವಲಯಗಳಲ್ಲಿ ಸತ್ಯ, ನ್ಯಾಯ ಹಾಗೂ ಸೌಹಾರ್ದ ಕುಂದುತ್ತಿರುವುದು ದೇಶದ ಭವಿಷ್ಯಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿದರು.

ವ್ಯಕ್ತಿಯ ಖಾಸಗಿತನ, ಗೌರವಯುತ ಜೀವನ ಹಾಗೂ ಧಾರ್ಮಿಕ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ಅಪಾಯದ ಅಂಚಿನಲ್ಲಿವೆ ಎಂಬ ಭಾವನೆ ಮೂಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಜಾತಿ–ಧರ್ಮ–ಕುಲ–ಅಂತಸ್ತಿನ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದರು. ಪ್ರತಿದಿನ ಅನೇಕ ಮುಗ್ಧ ಜನರು ವಂಚಕರ ಕೈಗಳಲ್ಲಿ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಈ ಹಿನ್ನೆಲೆ ಯೇಸು ಕ್ರಿಸ್ತನ ಜನನೋತ್ಸವವು ಪ್ರತಿಯೊಬ್ಬ ನಾಗರಿಕ ಮತ್ತು ಪ್ರತಿಯೊಂದು ಸಂಸ್ಥೆಗೆ ಪರಸ್ಪರ ಗೌರವ, ಮಾನವ ಘನತೆ, ಸತ್ಯನಿಷ್ಠೆ ಮತ್ತು ನೈತಿಕತೆಯನ್ನು ಕಾಪಾಡುವ ವಿಶೇಷ ಕರೆಯನ್ನು ನೀಡುತ್ತದೆ ಎಂದು ಅವರು ಹೇಳಿದರು. ಅಸತ್ಯ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ತಿರಸ್ಕರಿಸಿ, ಹಿಂಸೆಗೆ ಬದಲಾಗಿ ಶಾಂತಿ ಮತ್ತು ಸಂವಾದದ ಮಾರ್ಗವನ್ನು ಅನುಸರಿಸಬೇಕೆಂದು ಕರೆ ನೀಡಿದರು.

ಸತ್ಯ, ಪಾರದರ್ಶಕತೆ ಮತ್ತು ನೈತಿಕತೆಯನ್ನು ರಕ್ಷಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಅದು ಸಮಾಜದ ಭವಿಷ್ಯದ ಮೂಲಭೂತ ಆಧಾರಸ್ತಂಭವಾಗಿದೆ ಎಂದು ತಿಳಿಸಿದ ಧರ್ಮಾಧ್ಯಕ್ಷರು, ಜನಸಾಮಾನ್ಯರು, ಜನಪ್ರತಿನಿಧಿಗಳು, ಸರ್ಕಾರಗಳು ಹಾಗೂ ಆಡಳಿತ ಸಂಸ್ಥೆಗಳು ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ನ್ಯಾಯ, ಪಾರದರ್ಶಕತೆ ಮತ್ತು ಜನಪರ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

2025ರ ಜ್ಯೂಬಿಲಿ ವರ್ಷದ ಕ್ರಿಸ್‌ಮಸ್ ಹಬ್ಬವು ದೇಶಕ್ಕೆ ಶಾಂತಿ, ಸಮಾಜಕ್ಕೆ ಸಮನ್ವಯ ಮತ್ತು ಸಾರ್ವಜನಿಕ ಬದುಕಿಗೆ ನೈತಿಕ ಪುನರುಜ್ಜೀವನವನ್ನು ತರಲಿ ಎಂದು ಆಶಿಸಿದರು. ಪ್ರೀತಿ, ಸತ್ಯ ಮತ್ತು ಶಾಂತಿಯ ಬೆಳಕು ಮನ–ಮನೆಗಳಲ್ಲಷ್ಟೇ ಅಲ್ಲ, ಸಾರ್ವಜನಿಕ ವ್ಯವಸ್ಥೆ ಮತ್ತು ರಾಷ್ಟ್ರದ ನಿರ್ಧಾರಗಳಲ್ಲೂ ಹೊಳೆಯಲಿ ಎಂಬುದು ತಮ್ಮ ಪ್ರಾರ್ಥನೆ ಎಂದರು.

ನಾಡಿನ ಸಮಸ್ತ ಜನತೆಗೆ ಕ್ರಿಸ್‌ಮಸ್ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಎಲ್ಲರ ಮೇಲೂ ದೇವರ ಆಶೀರ್ವಾದ ಇರಲಿ ಎಂದು ಡಾ. ಪೀಟರ್ ಪಾವ್ ಸಲ್ದಾನ್ಹಾ ಸಂದೇಶದಲ್ಲಿ ಕೋರಿದರು.

error: Content is protected !!