
ಪಾವಗಡ: ಪಟ್ಟಣದ ಹೊರವಲಯದ ಕಡಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ಕಾರು ಹಾಗೂ ಬಸ್ ನಡುವೆ ಭೀಕರ ರಸ್ತೆ ಅಪಘಾತ ಇಂದು(ಡಿ.20) ಬೆಳಿಗ್ಗೆ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಐವಾರ್ಲಹಳ್ಳಿ ಗ್ರಾಮದ ನಿವಾಸಿಚಂದ್ರಶೇಖರ್ ರೆಡ್ಡಿ (38) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.
ಪಾವಗಡ ಪಟ್ಟಣದಿಂದ ಅಂಧ್ರದ ಪೆನುಕೊಂಡದತ್ತ ಹೋಗುತ್ತಿದ್ದ ಇನೋವಾ ಕಾರು ಮತ್ತು ಪೆನುಕೊಂಡದಿಂದ ಪಾವಗಡಗೆ ಬರುತ್ತಿದ್ದ ಎ.ಪಿ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಬೆಳಗಿನ ಸಮಯದಲ್ಲಿ ದಟ್ಟವಾದ ಮಂಜು ಕಾರಣ ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಚಾಲಕರೊಬ್ಬರೇ ಇದ್ದಿರುವುದಾಗಿ ತಿಳಿದು ಬಂದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಪಾವಗಡ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾವಗಡ ಪೊಲೀಸ್ ಠಾಣೆಯ ಸಿಐ ಸುರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.