ತಿರುನಂತಪುರ : ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇರಳದ ವಿಶೇಷ ತನಿಖಾ ತಂಡ ಕರ್ನಾಟಕ ಮೂಲದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ.

‘ಸ್ಮಾರ್ಟ್ ಕ್ರಿಯೇಷನ್ಸ್’ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ ಬಂಧಿತರು.
ತಿರುವನಂತಪುರದಲ್ಲಿರುವ ಅಪರಾಧ ವಿಭಾಗದ ಕಚೇರಿಗೆ ಪಂಕಜ್ ಭಂಡಾರಿ ಹಾಗೂ ಗೋವರ್ಧನ ಅವರನ್ನು ಕರೆತಂದು ವಿಚಾರಣೆಗೆ ಒಳಪಡಿಸಲಾಯಿತು. ಅವರ ವಿರುದ್ಧ ಸಾಕ್ಷ್ಯ ಸಿಕ್ಕಿದ ಬಳಿಕ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ, ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆ ವಿದ್ಯುತ್ ಲೇಪನಕ್ಕಾಗಿ ಸ್ಮಾರ್ಟ್ ಕ್ರಿಯೇಷನ್‌ಗೆ ತೆಗೆದುಕೊಂಡು ಹೋಗಿದ್ದು, ಆ ವೇಳೆ 400 ಗ್ರಾಂಗೂ ಅಧಿಕ ಚಿನ್ನವನ್ನು ತೆಗೆದು ಅದನ್ನು ಗೋವರ್ಧನಗೆ ಹಸ್ತಾಂತರಿಸಲಾಗಿದೆ ಎಂದು ಪೋಟಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆ ವೇಳೆ ಹೆಚ್ಚಿನ ಸಾಕ್ಷಿಗಳು ಪತ್ತೆಯಾಗಿದೆ. ಈಗಾಗಲೇ ಎಸ್‌ಐಟಿ ಯು ಗೋವರ್ಧನ ಚಿನ್ನದ ಅಂಗಡಿಯಿಂದ 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ.
ಬಂಧಿತರನ್ನು ಕೊಲ್ಲಂನ ನ್ಯಾಯಲವೊಂದರಕ್ಕೆ ಹಾಜರುಪಡಿಸಲಾಗಿದೆ.