ಡಿ.21: ಉರ್ವಾ ಮಾರಿಗುಡಿ ದೇವಸ್ಥಾನದಲ್ಲಿ “ಧರ್ಮಾವಲೋಕನ ಸಭೆ”

ಮಂಗಳೂರು: “ಯತಿವರ್ಯರು ಮತ್ತು ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಅರಮನೆ, ಬೀಡುಗಳ ಅರಸರು ಹಾಗೂ ಗುತ್ತು ಮನೆತನದ ಗಡಿಕಾರರು ಹಾಗೂ ಯಜಮಾನರುಗಳ ಸಮಕ್ಷಮದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಯುವಸೇನೆ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಡಿ.21ರಂದು ಉರ್ವಾ ಮಾರಿಗುಡಿ ದೇವಸ್ಥಾನದಲ್ಲಿ ಧರ್ಮಾವಲೋಕನ ಸಭೆ ನಡೆಯಲಿದೆ” ಎಂದು ಸಭೆಯ ಅಧ್ಯಕ್ಷತೆ ವಹಿಸಿರುವ ದೋಣಿಂಜೆಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಬಳಿಕ ಮಾತಾಡಿದ ಕಮಲಾಕ್ಷ ಗಂಧಕಾಡು ಅವರು, “ಹಿಂದೂ ಧರ್ಮ ಸಂರಕ್ಷಣೆ ಮತ್ತು ಇಂದಿನ ಯುವ ಪೀಳಿಗೆಯಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಧರ್ಮದ ಕುರಿತು ಅವಲೋಕನ ಮತ್ತು ಒಳಿತು ಕೆಡುಕುಗಳ ಕುರಿತು ಚರ್ಚೆ ನಡೆಯಬೇಕಿದೆ” ಎಂದರು.

ಜಗದೀಶ್ ಅಧಿಕಾರಿ ಮಾತಾಡಿ, “ಧರ್ಮಾವಲೋಕನ ಸಭೆಯು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಹಿಂದೂ ಧರ್ಮದಲ್ಲಿ ದೈವಾರಾಧನೆ ಮತ್ತು ದೇವತಾ ಆರಾಧನೆಯಲ್ಲಿ ಅನೇಕ ಜಿಜ್ಞಾಸೆಯಿದ್ದು ಧಾರ್ಮಿಕ ಆಚರಣೆಗಳಲ್ಲಿ ಭಿನ್ನಾಭಿಪ್ರಾಯವಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ಚರ್ಚಿಸುವ ಮೂಲಕ ಒಮ್ಮತಕ್ಕೆ ಬರಲು ಇಂತಹ ವೇದಿಕೆ ಸೂಕ್ತವಾಗಿದೆ” ಎಂದರು.

ಪತ್ರಿಕಾಗೋಷ್ಟಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಧಾರ್ಮಿಕ ಚಿಂತಕ ಕಿರಣ್ ಉಪಾಧ್ಯಾಯ, ವಿಜಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!