ನವದೆಹಲಿ: 2026 ರ ಅಂತ್ಯದ ವೇಳೆಗೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಹೊಸ ತಂತ್ರಜ್ಞಾನವು ಉಪಗ್ರಹ ಮತ್ತು AI ಆಧಾರಿತವಾಗಿದ್ದು ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಕಾಯುವ ಅಗತ್ಯವಿಲ್ಲ ಎಂದು ಹೇಳಿದರು.
ಮೊದಲು ಟೋಲ್‌ನಲ್ಲಿ ಹಣ ಪಾವತಿಸಬೇಕಿತ್ತು. ಈ ಪ್ರಕ್ರಿಯೆ ಮುಗಿಸಿಕೊಳ್ಳಲು 3-10 ನಿಮಿಷವಾಗುತ್ತಿತ್ತು. ಫಾಸ್ಟ್ ಟ್ಯಾಗ್ ಬಂದ ನಂತರ 60 ಸೆಕೆಂಡ್ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಟೋಲ್ ಪ್ರಕ್ರಿಯೆ ಮುಕ್ತಾಯವಾಗುತ್ತಿದೆ. ಇದರಿಂದ ನಮ್ಮ ಆದಾಯ ಕನಿಷ್ಠ 5 ಸಾವಿರ ಕೋಟಿ ರೂ. ಏರಿಕೆಯಾಗಿದೆ ಎಂದು ವಿವರಿಸಿದರು.
ದೇಶಾದ್ಯಂತ ಬಹು ಪಥ ಮುಕ್ತ ಹರಿವು (Multi-Lane Free Flow) ಜಾರಿಯಾದರೆ ಕಾರುಗಳು ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಟೋಲ್ ದಾಟಬಹುದು. 2026 ರ ಅಂತ್ಯದ ವೇಳೆಗೆ ನಾವು ಈ ಕೆಲಸವನ್ನು ಪೂರ್ಣಗೊಳಿಸುತ್ತೇವೆ. ಇದಿರಂದಾಗಿ ಸುಮಾರು 1,500 ಕೋಟಿ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ. ನಮ್ಮ ಆದಾಯವು ಇನ್ನೂ 6,000 ಕೋಟಿ ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು ಟೋಲ್ ಕಳ್ಳತನ ಕೊನೆಗೊಳ್ಳುತ್ತದೆ ಎಂದು ತಿಳಿಸಿದರು.
ಸರಿಯಾಗಿ ನಿರ್ವಹಣೆ ಮಾಡದ ಹೆದ್ದಾರಿ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಸೂಚನೆ ನೀಡಿದ ಅವರು, ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಎರಡು ವರ್ಷಗಳ ಕಾಲ ಡಿಬಾರ್ ಮಾಡಲಾಗುತ್ತದೆ. ಇದರಿಂದ ಅವರು ಮುಂದಿನ ಟೆಂಡರ್‌ಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.