ಸಾಮಾಜಿಕ ಜಾಲತಾಣಗಳಲ್ಲಿ ಕಿಕ್‌ಬಾಕ್ಸಿಂಗ್ ಮಾಡುತ್ತಿರುವ ವೃದ್ಧ ವ್ಯಕ್ತಿಯೊಬ್ಬರ ವೀಡಿಯೋ ಭಾರೀ ವೈರಲ್ ಆಗಿದೆ. ಈ ವೀಡಿಯೋಗೆ ಕಾರಣವಾದ ವಿಶೇಷತೆ ಎಂದರೆ, ಆ ವ್ಯಕ್ತಿ ಥೇಟ್ ಮಹಾತ್ಮ ಗಾಂಧಿಯವರನ್ನು ಹೋಲುತ್ತಿದ್ದಾರೆ.

X (ಹಳೆಯ ಟ್ವಿಟರ್) ಸಾಮಾಜಿಕ ಮಾಧ್ಯಮ ಖಾತೆಯೊಂದರಲ್ಲಿ, “ಈ ವೃದ್ಧ ವ್ಯಕ್ತಿ ಎಷ್ಟು ಚುರುಕಾಗಿದ್ದಾರೆ ನೋಡಿ. ಇನ್‌ಸ್ಟಾಗ್ರಾಮ್ ಇಂತಹಾ ಅದ್ಭುತ ಪ್ರತಿಭೆಗಳಿಂದ ತುಂಬಿದೆ” ಎಂಬ ಶೀರ್ಷಿಕೆಯೊಂದಿಗೆ ಈ ಕ್ಲಿಪ್ ಹಂಚಿಕೊಳ್ಳಲಾಗಿದೆ.
ವೀಡಿಯೋದಲ್ಲಿ ಕಪ್ಪು ಸ್ವೆಟ್‌ಪ್ಯಾಂಟ್ ಧರಿಸಿ, ಶರ್ಟ್ ಇಲ್ಲದೆ, ತೀವ್ರ ಕಿಕ್‌ಬಾಕ್ಸಿಂಗ್ ಅಭ್ಯಾಸ ಮಾಡುತ್ತಿರುವ ವೃದ್ಧ ವ್ಯಕ್ತಿ ಬೆವರು ಸುರಿಸುತ್ತಿರುವುದು ಕಾಣಿಸುತ್ತದೆ. ಆದರೆ ನೆಟ್ಟಿಗರ ಗಮನ ಸೆಳೆದಿದ್ದು ಅವರ ದೇಹದಾರ್ಢ್ಯಕ್ಕಿಂತಲೂ ಹೆಚ್ಚು, ಬೋಳು ತಲೆ, ಕನ್ನಡಕ ಕಣ್ಣುಗಳು ಮತ್ತು ಮೈಕಟ್ಟು. ಇದು ಥೇಟ್ ಗಾಂಧೀಜಿಯವರನ್ನು ಹೋಲಿಸುವಂತಿದೆ.

ಈ ದೃಶ್ಯವನ್ನು ನೋಡಿ “ಮಹಾತ್ಮ ಗಾಂಧೀಜಿ ಮತ್ತೆ ಜೀವವಾದಂತೆ ಇದೆ” ಎಂದು ಅನೇಕರು ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ. “ಬ್ರಿಟಿಷರು ಭಾರತ ತೊರೆದ ನಿಜವಾದ ಕಾರಣ ಇದೇ” ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೋದಲ್ಲಿರುವ ವ್ಯಕ್ತಿ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ರಾಜೀವ್ ಡಿಎಸ್ ಚೌಹಾಣ್ ಎಂದು ತಿಳಿದು ಬಂದಿದೆ. 61 ವರ್ಷದ ರಾಜೀವ್ ಚೌಹಾಣ್ ಅವರು ಸೇನಾ ನಿವೃತ್ತ ಯೋಧರಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 1.32 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಇದ್ದಾರೆ.

ರಾಜೀವ್ ಡಿಎಸ್ ಚೌಹಾಣ್ ಅವರು ಆಗಾಗ್ಗೆ ಕಿಕ್‌ಬಾಕ್ಸಿಂಗ್, ಸಮರ ಕಲೆಗಳು, ದೇಹದಾರ್ಢ್ಯ ತರಬೇತಿ, ನನ್‌ಚುಕ್ ಅಭ್ಯಾಸ ಹಾಗೂ ವೇಟ್‌ಲಿಫ್ಟಿಂಗ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಸಂದೇಶವನ್ನು ಸಾರುವ ಈ ವೀಡಿಯೋ, ಗಾಂಧೀಜಿಯಂತೆಯೇ ಕಾಣುವ ಕಿಕ್‌ಬಾಕ್ಸಿಂಗ್ ಯೋಧನ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.