ಬಹುಭಾಷಾ ನಟಿ ಶ್ರೀಲೀಲಾಗೂ ರಶ್ಮಿಕಾ ಮಂದಣ್ಣಗೆ ಆದಂತೆ ಎಐ ಕಾಟ ಶುರುವಾಗಿದೆ. ಕೆಲವು ಕಿಡಿಗೇಡಿಗಳು ನನ್ನ ನಕಲಿ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿ ಹರಿಬಿಟ್ಟಿದ್ದಾಗಿ ಶ್ರೀಲೀಲಾ ಆರೋಪಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಟಿ ಶ್ರೀಲೀಲಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ನಾನು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ನೆಟ್ಟಿಗರು ದಯವಿಟ್ಟು ಈ ಎಐ ಅಸಂಬದ್ಧತೆಯನ್ನು ಬೆಂಬಲಿಸಬೇಡಿ. ತಂತ್ರಜ್ಞಾನದ ಬಳಕೆಗೂ, ದುರ್ಬಳಕೆಗೂ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿ ಬೆಳವಣಿಗೆ, ಜೀವನವನ್ನು ಸರಳಗೊಳಿಸಬೇಕೆ ವಿನಃ ಜೀವನವನ್ನು ಇನ್ನಷ್ಟು ಕಠಿಣಗೊಳಿಸಬಾರದು’ ಎಂದಿದ್ದಾರೆ ನಟಿ.

‘ಇಲ್ಲಿರುವ ಪ್ರತಿ ಹೆಣ್ಣು ಸಹ ಯಾರೊ ಒಬ್ಬರಿಗೆ ಮಗಳು, ಮೊಮ್ಮಗಳು, ಸಹೋದರಿ ಆಗಿರುತ್ತಾರೆ. ಮಹಿಳೆ ಕಲೆಯನ್ನು ತನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ ಮಾತ್ರಕ್ಕೆ ಆಕೆಯ ಮೇಲೆ ದಾಳಿ ಮಾಡಬಹುದು ಎಂದಲ್ಲ. ನಾವು ಮನೊರಂಜನಾ ಕ್ಷೇತ್ರ ಸೇರಿರುವುದು ಮನರಂಜನೆ ನೀಡಲು, ಖುಷಿ ಹಂಚಲು. ನಮ್ಮ ಸುತ್ತಲೂ ಒಂದು ಸಂರಕ್ಷಿತ ವಲಯ ಇದೆ ಎಂಬ ನಂಬಿಕೆಯಿಂದ ನಾವು ಇಲ್ಲಿ ಬಂದಿದ್ದೇವೆ. ನನ್ನ ಬ್ಯುಸಿ ಕೆಲಸಗಳ ನಡುವೆ ಆನ್ಲೈನ್ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸಿರಲಿಲ್ಲ. ಆದರೆ ನನ್ನ ಆತ್ಮೀಯರು ಅದನ್ನು ನನ್ನ ಗಮನಕ್ಕೆ ತಂದಿದ್ದಾರೆ ನಾನು ಅವರಿಗೆ ಋಣಿಯಾಗಿದ್ದೀನಿ’ ಎಂದಿದ್ದಾರೆ ನಟಿ.

‘ನನ್ನ ಸುತ್ತ ಮುತ್ತ ಏನೇ ನಡೆದರು ಅದರ ಬಗ್ಗೆ ಗಮನ ವಹಿಸದೆ ನನ್ನ ಜೀವನ ನಾನು ನಡೆಸಿಕೊಂಡು ಬಂದಿದ್ದೀನಿ. ಆದರೆ ಈಗ ಆಗಿರುವುದು ನನಗೆ ತೀವ್ರ ಘಾಸಿ ತಂದಿದೆ. ಇದು ನನಗೆ ಮಾತ್ರವಲ್ಲ ನನ್ನಂತೆ ಚಿತ್ರರಂಗದಲ್ಲಿರುವ ಕೆಲವು ನಟಿಯರಿಗೂ ಆಗಿರುವುದಾಗಿ ತಿಳಿದಿದೆ. ಹಾಗಾಗಿ ಎಲ್ಲರ ಪರವಾಗಿ ನಾನು ಮನವಿ ಮಾಡುತ್ತಿದ್ದೇನೆ. ಸಾಮಾಜಿಕ ಹೊಣೆ ಉಳ್ಳವರು, ನನ್ನ ಅಭಿಮಾನಿಸುವವರು ಎಲ್ಲರೂ ಈ ರೀತಿಯ ಸನ್ನಿವೇಶದಲ್ಲಿ ನಮ್ಮ ಪರವಾಗಿ ನಿಲ್ಲುತ್ತೀರೆಂದು ನಂಬಿದ್ದೇನೆ. ಇನ್ನು ಮುಂದಿನದ್ದನ್ನು ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳುತ್ತಾರೆ’ ಎಂದಿದ್ದಾರೆ ನಟಿ ಶ್ರೀಲೀಲಾ.

ಶ್ರೀಲೀಲಾ ಅವರ ನಕಲಿ ವಿಡಿಯೋಗಳನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ನಟಿ ದೂರು ಸಹ ನೀಡಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಸಹ ಇದೇ ರೀತಿಯ ಸಮಸ್ಯೆ ಎದುರಿಸಿದ್ದು, ಪೊಲೀಸರಿಗೆ ದೂರು ಸಹ ನೀಡಿದ್ದರು.
