ಮೂಡುಬಿದಿರೆ: ಕಾರಿನಲ್ಲಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್‌ನನ್ನು ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಆಂಡ್ ಟೀಂ ಸಿನಿಮಾ ಶೈಲಿಯಲ್ಲಿ ಛೇಸ್ ಮಾಡಿ ಬಂಧಿಸಿದ ಘಟನೆ ಕೊಡಂಗಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ. ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ಕಲ್ಲಡ್ಕದ ರೌಡಿಶೀಟರ್ , ಸುಮಾರು 5ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಾಮೀಲಾಗಿರುವ ತೌಸೀಫ್ ಪೊಲೀಸ್ ಕೈಗೆ ಸಿಕ್ಕಿಬಿದ್ದ ಆರೋಪಿ. ಬಂಧಿತನಿಂದ ಸುಮಾರು 50ಸಾವಿರ ರೂ. ಮೌಲ್ಯದ 10.800 ಗ್ರಾಂ ತೂಕದ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸುಮಾರು 3ಲಕ್ಷ ರೂ.ಮೌಲ್ಯದ ಕಾರು, ಈತನ ಕಾರಿನಲ್ಲಿದ್ದ ತಲವಾರನ್ನು ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಟೀಂ ಜಪ್ತಿ ಮಾಡಿದೆ.

ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಿಂದ ಕೊಡಂಗಲ್ಲು – ಮಹಾವೀರ ಕಾಲೇಜು ಮಾರ್ಗವಾಗಿ ಮಂಗಳೂರಿಗೆ ಎಂಡಿಎಂಎ ಸಹಿತ ಮಾರಕ ಅಸ್ತ್ರಗಳೊಂದಿಗೆ ರೌಡಿ ತೌಸೀಫ್ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಗೆ ಮಾಹಿತಿ ದೊರೆತಿತ್ತು. ಈತನಿಗಾಗಿ ಪೊಲೀಸ್ ಟೀಂ ಮೂಡಬಿದ್ರೆಯ ಕೊಡಂಗಲ್ಲುನಲ್ಲಿ ಹೊಂಚು ಹಾಕಿ ಕುಳಿತಿತ್ತು.

ಆತನ ಕಾರು ಬುತ್ತಿದ್ದಂತೆ ಸಂದೇಶ್ ಪಿ.ಜಿ. ಆತನ ಕಾರು ನಿಲ್ಲಿಸಲು ಹೋದಾಗ ಆತ ಅಲ್ಲಿಂದ ಕಾರು ಸಮೇತ ಎಸ್ಕೇಪ್ ಆಗಿದ್ದಾನೆ. ಪಟ್ಟು ಬಿಡದ ಪೊಲೀಸರು ರೌಡಿಯ ಕಾರನ್ನು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ. ಕೊನೆಗೂ ರೌಡಿಗೆ ತಪ್ಪಿಸಲೂ ಸಾಧ್ಯವಾಗದಂತೆ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 5 ಪ್ರಕರಣಗಳು ದಾಖಲಾಗಿದ್ದಲ್ಲದೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು.
ಆರೋಪಿಯ ವಿರುದ್ಧ ಮೂಡಬಿದಿರೆ ಅಪರಾಧ ಕ್ರಮಾಂಕ 200/2025 ಕಲಂ 8(c), 22(c) ಎನ್ ಡಿಪಿಎಸ್ ಕಾಯ್ದೆ 3, 25(1B)(a) Arms Act ರಂತೆ ಪ್ರಕರಣ ದಾಖಲಾಗಿದೆ.