‘ಬ್ರ್ಯಾಂಡ್‌ ಮಂಗಳೂರಿ’ಗೆ ಮಸಿ ಬಳಿಯುತ್ತಿರುವ ಮೀನೂಟದ ಹೋಟೆಲ್‌ಗಳು!

-ಗಿರೀಶ್‌ ಮಳಲಿ

ಮಂಗಳೂರು: ಮೀನು, ಸಮುದ್ರ, ಸಂಸ್ಕೃತಿ ಮತ್ತು ರುಚಿ—ಇವೆರಡೂ ಮಂಗಳೂರಿನ ಗುರುತು. ʻಟೇಸ್ಟ್‌ ಆಫ್‌ ಮಂಗಳೂರುʼ ಎಂದರೆ ದೇಶದಾದ್ಯಂತ ಜನರಿಗೆ ಬಾಯಲ್ಲಿ ನೀರು ತರಿಸುವ ಹೆಸರು. ಆದರೆ ಈ ಹೆಸರಿನ ಮರ್ಯಾದೆಯನ್ನು ಕೆಲ ಮೀನೂಟದ ಹೋಟೆಲ್‌ಗಳು ವ್ಯವಸ್ಥಿತವಾಗಿ ಹಾಳು ಮಾಡುತ್ತಿರುವುದು ಅತ್ಯಂತ ವಿಷಾದಕರ ಸಂಗತಿ. ʻಟೇಸ್ಟ್‌ ಆಫ್‌ ಮಂಗಳೂರುʼ ಹೆಸರು ಕೆಡಿಸುತ್ತಿರುವ ಹೋಟೆಲ್‌ಗಳು ಪರೋಕ್ಷವಾಗಿ ‘ಬ್ರ್ಯಾಂಡ್‌ ಮಂಗಳೂರಿ’ಗೆ ಮಸಿ ಬಳಿಯುತ್ತಿದ್ದಾರೆ.

ಬೆಂಗಳೂರಿನ ಜಯನಗರ, ಮೆಜೆಸ್ಟಿಕ್‌ನಂತಹಾ ನಗರ ಪ್ರದೇಶಗಳಲ್ಲೂ ಫ್ರೆಷ್‌ ಮೀನು ಸಿಗುವ ಕಾಲದಲ್ಲಿ, ಮೀನು ಉತ್ಪತ್ತಿಯ ಕೇಂದ್ರವಾದ ಮಂಗಳೂರಿನ ಹೋಟೆಲ್‌ಗಳಲ್ಲಿ ಕೊಳೆತ ಮೀನು ಬಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದು ನಗರಕ್ಕೆ ಅವಮಾನ.

ಪ್ರಮೋಷನ್‌ ವಿಡಿಯೋ ನೋಡಿ ಹೋಟೆಲ್‌ಗೆ ಹೋದರೆ…!
ಕೆಲವು ಮೀನೂಟದ ಹೋಟೆಲ್‌ಗಳನ್ನು ಯೂಟ್ಯೂಬರ್‌ಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿಯಾಗಿ ಪ್ರಮೋಷನ್ ಮಾಡಲಾಗುತ್ತಿದೆ. ಕ್ಯಾಮೆರಾ ಮುಂದೆ ಸ್ವಚ್ಛತೆ, ಗುಣಮಟ್ಟ, ಟೇಸ್ಟ್‌ ಬಗ್ಗೆ ದೊಡ್ಡ ದೊಡ್ಡ ಮಾತುಗಳು‌ ಬರುತ್ತದೆ. ಇದನ್ನು ನಂಬಿ ಹೋಟೆಲ್‌ಗೆ ಹೋದ್ರೆ ಗ್ರಾಹಕರಿಗೆ ಸಿಗುವುದೇನು? ವಾಸನೆ ಬರುವ, ಸರಿಯಾಗಿ ತೊಳೆಯದ, ಕೊಳೆತ ಮೀನುಗಳನ್ನೇ ಮಸಾಲೆಯಲ್ಲಿ ಕರಿದು ಬಡಿಸುತ್ತಾರೆ. ಹೊರಗಿನಿಂದ ಮಂಗಳೂರಿಗೆ ಮೀನೂಟಕ್ಕಾಗಿ ಬರುವವರು ಈ ಪ್ರಚಾರವನ್ನು ನಂಬಿ ಹೋಟೆಲ್‌ಗಳಿಗೆ ಹೋಗುತ್ತಾರೆ. ಆದರೆ ಅವರು ತಿಂದ ಬಳಿಕ ಮಂಗಳೂರಿನ ಹೋಟೆಲ್‌ನಲ್ಲಿ ಟೇಸ್ಟ್‌ ಬಗ್ಗೆ ಅಲ್ಲ ಎಂದು ಇಲ್ಲಿನ ಹೋಟೆಲ್‌ಗಳ ಬಗ್ಗೆ, ಇಲ್ಲಿನ ಟೇಸ್ಟ್‌ ಬಗ್ಗೆ ತೆಗಳಿಕೊಂಡು, ತಮಾಷೆ ಮಾಡಿಕೊಂಡು ಹೋಗುತ್ತಿದ್ದಾರೆ.

ಗಲೀಜೆಂದ್ರೆ ಗಲೀಜು, ಸ್ವಚ್ಛತೆಯೇ ಇಲ್ಲ
ಕಂಕನಾಡಿ–ಮಿಲಾಗ್ರೀಸ್ ರಸ್ತೆ, ವೆಲೆನ್ಸಿಯಾ ರಸ್ತೆ, ಕರಂಗಲಪಾಡಿ, ಹಂಪನಕಟ್ಟೆ ಓಲ್ಡ್‌ ಬಸ್‌ಸ್ಟ್ಯಾಂಡ್‌, ಜೈಲ್‌ ರೋಡ್‌, ಕುದ್ರೋಳಿ, ವೆನ್‌ಲಾಕ್‌ ಸುತ್ತಮುತ್ತಲಿನ ಹಲವು ಮೀನೂಟದ ಹೋಟೆಲ್‌ಗಳ ಸ್ಥಿತಿಗತಿ ಅತೀವ ಕಳಪೆ ಎನ್ನುವುದು ಸಾರ್ವಜನಿಕ ಆರೋಪ. ಕೆಲವೆಡೆ ಜಿರಳೆಗಳು ಅಡುಗೆ ಕೋಣೆ ಮತ್ತು ಊಟದ ಹಾಲ್‌ನಲ್ಲಿ ಮುಳುಮುಳು ಚಲಿಸುತ್ತಿವೆ. ಅನ್ನದಲ್ಲಿ ಕೋಳಿಯ ಎಲುಬು ಸಿಕ್ಕ ಘಟನೆಗಳು, ಗಲೀಜು ಲೋಟುಗಳು, ಸರಿಯಾಗಿ ತೊಳೆಯದ ತಟ್ಟೆಗಳು—ಇವೆಲ್ಲಾ “ಟೇಸ್ಟ್‌ ಆಫ್‌ ಮಂಗಳೂರು” , ʻಬ್ರಾಂಡ್‌ ಮಂಗಳೂರ್‌ʼ ಮರ್ಯಾದೆ ತೆಗೆಯುತ್ತದೆ.

ಕೊಳೆತ ಮೀನುಗಳಿಗೆ ಮಸಾಲೆಯ ಮುಖವಾಡ!
ಕಡಿಮೆ ದರಕ್ಕೆ ಸಿಗುವ ಹಳೆಯ, ಕೊಳೆತ ಮೀನುಗಳನ್ನು ಸರಿಯಾಗಿ ತೊಳೆಯದೆ, ದೊಡ್ಡ ಪಾತ್ರೆಗಳಲ್ಲಿ ಬೇಯಿಸಿ ಇಟ್ಟು, ನಂತರ ಮಸಾಲೆ ಹಾಕಿ ಎಣ್ಣೆಯಲ್ಲಿ ಫ್ರೈ ಮಾಡುವ ಪದ್ಧತಿ ನಡೆಯುತ್ತಿದೆ ಎನ್ನುವ ಗಂಭೀರ ಆರೋಪಗಳಿವೆ. ತಣ್ಣಗಾದಾಗ ವಾಸನೆ ಬರುವ, ತಿಂದ ಬಳಿಕ ಹೊಟ್ಟೆ ತೊಳೆಯುವ, ವಾಕರಿಕೆ ಉಂಟುಮಾಡುವ ಆಹಾರವನ್ನು “ಸ್ಪೆಷಲ್‌ ಮೀನೂಟ” ಎಂದು ಬಡಿಸಲಾಗುತ್ತಿದೆ. ಕೆಲವೆಡೆ ಮಸಾಲೆಯ ಪದರದೊಳಗೆ ದುರ್ಗಂಧವನ್ನು ಮುಚ್ಚಲು ಯತ್ನಿಸಲಾಗುತ್ತಿದೆ. ಇನ್ನೂ ಕೆಲವೆಡೆ ಎಣ್ಣೆಯಲ್ಲಿ ಹುರಿದ ಮಸಾಲೆಯೇ ರುಚಿ ಎಂದು ತೋರಿಸುವ ಪ್ರಯತ್ನ. ಆದರೆ ಇದು ಮಂಗಳೂರಿನ ಅಡುಗೆ ಪದ್ಧತಿಯೇ ಅಲ್ಲ; ಇದು ಮಂಗಳೂರಿನ ಟೇಸ್ಟ್‌ಗೆ ಮಾಡಿದ ದ್ರೋಹ. ಈ ಅಸಲಿಯತ್ತು ಗೊತ್ತಿರುವ ಮಂಗಳೂರಿನ ಅನೇಕ ಜನರು ಈಗ ಹೋಟೆಲ್‌ನಲ್ಲಿ ಮೀನು ತಿನ್ನುವುದನ್ನೇ ಬಿಟ್ಟಿದ್ದಾರೆ. “ಹೊರಗಿಂದ ಬಂದವರು ತಿನ್ನಲಿ” ಎನ್ನುವ ಮನಸ್ಥಿತಿ ಬೆಳೆದುಬರುತ್ತಿರುವುದು ಅಪಾಯಕಾರಿ ಮನಃಸ್ಥಿತಿ. ಇದು ಪ್ರವಾಸೋದ್ಯಮಕ್ಕೂ, ನಗರ ಪ್ರತಿಷ್ಠೆಗೂ ಹೊಡೆತ.

ದುಬೈಗಿಂತಲೂ ಜಾಸ್ತಿ ರೇಟು- ಗ್ರಾಹಕರ ಹಗಲು ದರೋಡೆ
ಗುಣಮಟ್ಟ ಇಲ್ಲ, ಸ್ವಚ್ಛತೆ ಇಲ್ಲ, ಆದರೂ ದರಗಳು ದುಬೈಗಿಂತಲೂ ಜಾಸ್ತಿ. ನಾಲ್ಕು ತುಂಡು ಕೋಳಿ ಸುಕ್ಕಕ್ಕೆ ನೂರು ರೂಪಾಯಿಯಿಂದ ಆರಂಭ. ಬಂಗುಡೆ, ಬೂತಾಯಿ, ನಂಗ್‌ ನಂಥಾ ಸಾಮಾನ್ಯ ಮೀನುಗಳು ಹೋಟೆಲ್‌ ಮೆನುವಿನಲ್ಲಿ ಬಂಗಾರದ ಬೆಲೆ ಪಡೆಯುತ್ತವೆ. ಇದು ವ್ಯಾಪಾರವೇ ಅಥವಾ ದರೋಡೆಯೇ ಎಂಬ ಪ್ರಶ್ನೆ ಗ್ರಾಹಕರಲ್ಲಿದೆ.

ಆರೋಗ್ಯ ಇಲಾಖೆಯವರೇ ಇಲ್ಲಿರುವ ಹೋಟೆಲ್‌ಗಳಿಗೆ ಕೂಡಲೇ ದಾಳಿ ನಡೆಸಿ
ಕಂಕನಾಡಿಯಿಂದ ಮಿಲಾಗ್ರೀಸ್‌ಗೆ ಹೋಗುವ ರಸ್ತೆಯಲ್ಲಿರುವ ಹೋಟೆಲ್‌ಗಳು, ವೆಲೆನ್ಸಿಯಾ ರಸ್ತೆಯಲ್ಲಿರುವ ಮೀನೂಟದ ಕ್ಯಾಂಟೀನ್‌, ಕಂಕನಾಡಿಯ ಆಸ್ಪತ್ರೆ ಸುತ್ತಮುತ್ತಲಿ ಮಾಂಸಾಹಾರಿ ಹೋಟೆಲ್‌ಗಳು ಹಾಗೂ ಕ್ಯಾಂಟೀನ್‌ಗಳು, ಕರಂಗಲಪಾಡಿ ಸರ್ಕಲ್‌ ಬಳಿಯ ಮೀನೂಟದ ಹೊಟೇಲ್‌, ಕರಂಗಲಪಾಡಿ ಆಸ್ಪತ್ರೆ ಆವರಣದಲ್ಲಿರುವ ಹೋಟೆಲ್‌ಗಳು, ಸ್ಟೇಟ್‌ ಬ್ಯಾಂಕ್, ಹಂಪನಕಟ್ಟೆ ಓಲ್ಡ್‌ ಬಸ್‌ ಸ್ಟ್ಯಾಂಡ್‌ ಬಳಿಯ ಮೀನೂಟದ ಹೋಟೆಲ್‌ಗಳು, ಜೈಲ್‌ ರೋಡ್‌ ರಸ್ತೆಯಲ್ಲಿರುವ ಹೋಟೆಲ್‌ಗಳು, ಕುದ್ರೋಳಿ, ವೆನ್‌ಲಾಕ್‌ ಎದುರು ಭಾಗದ ನಾನ್‌ ವೆಜ್ ಸಮೀಪದ ಹೋಟೆಲ್‌ಗಳು ಗಲೀಜು ಅಂದ್ರೆ ಗಲೀಜು. ಕೆಲವು‌ ಹೋಟೆಲ್‌ಗಳಲ್ಲಿ ಜಿರಳೆಯೂ ಮುಳು ಮುಳು ಚಲಿಸುತ್ತದೆ. ಅನ್ನದಲ್ಲಿ ಕೋಳಿಯ ಎಲುಬು, ಲೋಟ ಗಲೀಜು, ಅಡುಗೆ ಕೋಣೆ ಹೇಗಿರಬಹುದು.

ಇಷ್ಟೆಲ್ಲಾ ಆರೋಪಗಳ ನಡುವೆಯೂ ಆರೋಗ್ಯ ಇಲಾಖೆ ಮೀನೂಟದ ಹೋಟೆಲ್‌ಗಳ ಮೇಲೆ ನಿರಂತರ, ಕಟ್ಟುನಿಟ್ಟಿನ ದಾಳಿ ನಡೆಸಿರುವ ಉದಾಹರಣೆಗಳು ಅಪರೂಪ. ಆಹಾರದ ಗುಣಮಟ್ಟ, ಸ್ವಚ್ಛತೆ, ಸಂಗ್ರಹಣೆ, ಬೆಲೆ—ಎಲ್ಲದರ ಮೇಲೂ ತಕ್ಷಣದ ಪರಿಶೀಲನೆ ಅಗತ್ಯ.

‘ಟೇಸ್ಟ್‌ ಆಫ್‌ ಮಂಗಳೂರು’ ಉಳಿಯಬೇಕಿದೆ
ಮಂಗಳೂರಿನ ಮೀನೂಟ ಒಂದು ಬ್ರ್ಯಾಂಡ್‌. ಅದನ್ನು ಬೆಳೆಸಬೇಕಾದವರು ಇಂದು ಅದೇ ಬ್ರ್ಯಾಂಡ್‌ಗೆ ಮಸಿ ಬಳಿಯುತ್ತಿದ್ದಾರೆ. ಕೆಲ ಹೋಟೆಲ್‌ಗಳ ಲಾಭದಾಸೆಗೆ ಮಂಗಳೂರು ಎಂಬ ಊರಿನ ಹೆಸರೇ ಹಾಳಾಗಬಾರದು. ʻಟೇಸ್ಟ್‌ ಆಫ್‌ ಮಂಗಳೂರುʼ ಉಳಿಯಬೇಕೆಂದರೆ, ಬೇಜವಾಬ್ದಾರಿ ತೋರುವ ಹೋಟೆಲ್‌ಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ನಿಷ್ಠಾವಂತ ಹೋಟೆಲ್‌ಗಳಿಗೆ ಪ್ರೋತ್ಸಾಹ ಕೊಡಬೇಕಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ನಿರಂತರ ದಾಳಿ ಅನಿವಾರ್ಯವಾಗಿದೆ. ಇಲ್ಲದಿದ್ದರೆ, “ಮಂಗಳೂರಿಗೆ ಮೀನು ತಿನ್ನಲು ಬರಬೇಡಿ” ಎಂಬ ಸಂದೇಶವೇ ಹೊರಜಗತ್ತಿಗೆ ಹೋಗುತ್ತದೆ—ಅದು ಮಂಗಳೂರಿಗೆ ತಕ್ಕ ಗೌರವವಲ್ಲ.

 

 

error: Content is protected !!