ಶಬರಿಮಲೆ: ಘರ್ಜಿಸಿದ ಹುಲಿಗಳು- ಅರಣ್ಯ ಇಲಾಖೆಯಿಂದ ಕ್ಯಾಂಪ್

ಶಬರಿಮಲೆ: ಶಬರಿಮಲೆ ಕಾಡಿನಲ್ಲಿ ಹುಲಿಗಳ ಓಡಾಟ, ಚಲನವಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಲಿಕಲ್ಲು ಪ್ರದೇಶದಲ್ಲಿ ಜನರಿಗೆ ತುರ್ತು ಸಹಾಯ ಒದಗಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ವತಿಯಂದ ಕ್ಯಾಂಪ್, ಕಚೇರಿ ತೆರೆಯಲು ಶಾಸಕ ಪ್ರಮೋದ್ ನಾರಾಯಣ್ ನಿರ್ದೇಶನ ನೀಡಿದ್ದಾರೆ.

ಹಿಂದಿನ ದಿನಗಳಲ್ಲಿ ಹುಲಿಯ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಕ್ಯಾಂಪ್‌, ಆಫೀಸ್ ಕಾರ್ಯಾರಂಭ ಮಾಡಲಾಗಿದ್ದು, ಹುಲಿಯ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಅರಣ್ಯ ಸಿಬ್ಬಂದಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.‌ ಓಲಿಕಲ್ಲು ಪ್ರದೇಶವು ವನ್ಯಜೀವಿಗಳಿಂದ ತೀವ್ರ ಅಪಾಯ ಎದುರಿಸುತ್ತಿದ್ದು, ಸಂಜೆಯ ನಂತರ ಜನರು ಹೊರಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ರಾತ್ರಿ ನಾಲ್ಕು ಕಾಡು ಆನೆಗಳು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ಕೃಷಿ ಬೆಳೆಗಳಿಗೆ ಮತ್ತು ಮಾನವ ಜೀವಕ್ಕೆ ಅಪಾಯ ಉಂಟುಮಾಡುತ್ತಿವೆ.

ನಿನ್ನೆ ರಾತ್ರಿ ವರಂಬತ್‌ನ ಸೂಸಿ ಮೋಹನನ್ ಅವರ ಹಿತ್ತಲಿನಲ್ಲಿ ಕಟ್ಟಿಹಾಕಿದ್ದ ನಾಯಿಯ ಮೇಲೆ ಕಾಡು ಪ್ರಾಣಿ ದಾಳಿ ನಡೆಸಿ ಕೊಂದ ಘಟನೆ ವರದಿಯಾಗಿದ್ದು, ಅದು ಹುಲಿಯ ದಾಳಿ ಎನ್ನಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಆವರಿಸಿದೆ. ಇನ್ನು ಬೆಟ್ಟದ ಅಳಿಲು ಮತ್ತು ಮಂಗಗಳ ಉಪಟಳದಿಂದ ಕೃಷಿ ಸಂಪೂರ್ಣ ಅಸಾಧ್ಯವಾಗಿದ್ದು, ಕಾಡು ಪ್ರಾಣಿಗಳ ದಾಳಿಯ ಭಯದಿಂದ ಬೆಳಿಗ್ಗೆಯ ರಬ್ಬರ್ ಟ್ಯಾಪಿಂಗ್ ಕಾರ್ಯಕ್ಕೂ ಅಡಚಣೆ ಉಂಟಾಗಿದೆ.

ಗುಡ್ಡಗಾಡು ಪ್ರದೇಶದ ಜನರ ಸಂಕಷ್ಟವನ್ನು ಅರಿತ ಶಾಸಕ ಪ್ರಮೋದ್ ನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ, ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ತಕ್ಷಣ ನೀರು ಒದಗಿಸುವ ಕುರಿತು ಜಲ ಪ್ರಾಧಿಕಾರದ ಅಧಿಕಾರಿಗಳ ತುರ್ತು ಸಭೆಯನ್ನು ಶಾಸಕರು ಕರೆದಿದ್ದಾರೆ.

error: Content is protected !!