ಬೆಳ್ತಂಗಡಿ: ನಗರದ ಸಂತೆಕಟ್ಟೆ ಬಳಿಯ ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಮೂವರು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ: ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಸೋಮವಾರ ಶಾಲೆಗೆ ರಜೆ ಹಾಕಿ, ಮಧ್ಯಾಹ್ನದ ಬಳಿಕ ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಬಂದಿದ್ದರು. ಸಂತೆ ವೀಕ್ಷಿಸಿದ ನಂತರ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ಪಕ್ಕದಲ್ಲಿ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದ ವೇಳೆ, ಧರ್ಮದ ಹೆಸರಿನಲ್ಲಿ ಪ್ರಶ್ನಿಸಿ ನಿಂದನೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ವಿದ್ಯಾರ್ಥಿಗಳನ್ನು ಬಲವಂತವಾಗಿ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಇದೆ.
ಘಟನೆಯ ಬಗ್ಗೆ ಪ್ರಶ್ನಿಸಲು ಹೋದ ವಿದ್ಯಾರ್ಥಿಗಳ ಪೋಷಕರೊಂದಿಗೆ ಕೂಡ ಆಭರಣ ಮಳಿಗೆಯ ವ್ಯವಸ್ಥಾಪಕ ಹಾಗೂ ಇತರೆ ಸಿಬ್ಬಂದಿ ವಾಗ್ವಾದ ನಡೆಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯ ವೇಳೆ ಮೂವರು ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಹಲ್ಲೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ನಾಪತ್ತೆಯಾಗಿದ್ದು, ರಾತ್ರಿ ಪೋಷಕರು ಹುಡುಕಾಟ ನಡೆಸಿದ ಬಳಿಕ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
ಹಲ್ಲೆಯಿಂದ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಮಕ್ಕಳ ಹೇಳಿಕೆ ದಾಖಲಿಸಿದ ಬೆಳ್ತಂಗಡಿ ಪೊಲೀಸರು ಮಂಗಳವಾರ ಬಿಎನ್ ಎಸ್ u/s 126(2),115(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೈತಿಕ ಪೊಲೀಸ್‌ಗಿರಿ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.