ಮಂಗಳೂರು: ಸಂಚಾರಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ, ತಪ್ಪಿತಸ್ಥ ಚಾಲಕನಿಗೆ ಮಾನ್ಯ ನ್ಯಾಯಾಲಯವು ದಂಡ ವಿಧಿಸಿದ್ದು, ರಸ್ತೆ ಸುರಕ್ಷತೆಯ ಮಹತ್ವವನ್ನು ಸಾರ್ವಜನಿಕರಿಗೆ ಮತ್ತೆ ನೆನಪಿಸಿದೆ.

ನಗರ ಪೂರ್ವ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 182/2023 (ಕಲಂ 279, 337, 338 ಐಪಿಸಿ, ಸೆಕ್. 15(A) R/W 180 IMV ಕಾಯ್ದೆ, CMV ನಿಯಮ 115 R/W 190(2) MV) ಅಡಿಯಲ್ಲಿ, ಬಂಟ್ವಾಳ ತಾಲೂಕಿನ ಬರೇಬೆಟ್ಟು ಪೋಸ್ಟ್‌ನ ಮಡಕಟ್ಟೆ ಹೌಸ್ ನಿವಾಸಿ ಎಂ. ಶ್ರೀಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು.
ದಿನಾಂಕ 23-12-2023 ರಂದು ಮರೋಳಿಯ ಕೆನರಾ ಸ್ಟಿಂಗ್ಸ್ ಎದುರು NH-73 ರಸ್ತೆಯಲ್ಲಿ KA-19-MG-9810 ನಂಬ್ರದ ಕಾರನ್ನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ನಡೆಸಿದ ಆರೋಪಿ, ಮುಂದೆ ಸಾಗುತ್ತಿದ್ದ ಸ್ಕೂಟರ್ ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಪಾದಚಾರಿಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಇಬ್ಬರು ಪಾದಚಾರಿಗಳು ಗಾಯಗೊಂಡಿದ್ದು, ಈ ಪೈಕಿ ಒಬ್ಬರಿಗೆ ಬಲಕಾಲಿನ ಮೂಳೆ ಮುರಿತದ ಗಂಭೀರ ಗಾಯವಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಮಾನ್ಯ ಜೆ.ಎಂ.ಎಫ್.ಸಿ 8ನೇ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ ಅವರು ದಿನಾಂಕ 15-12-2025 ರಂದು ತಪ್ಪಿತಸ್ಥ ಕಾರು ಚಾಲಕ ಶ್ರೀಕೃಷ್ಣನಿಗೆ ₹ 8,500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಸಂಚಾರಪೂರ್ವ ಪೊಲೀಸ್ ಠಾಣೆಯ ಅಂದಿನ ಉಪನಿರೀಕ್ಷಕ ಈಶ್ವರಸ್ವಾಮಿ ಅವರು ಭಾಗಶಃ ನಡೆಸಿದ್ದು, ವೈ.ಎನ್. ಚಂದ್ರಮ್ಮ ಅವರು ಸಂಪೂರ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ಸಾಕ್ಷ್ಯ ವಿಚಾರಣೆ ನಡೆಸಿದ್ದು, ಆರೋನ್ ಡಿʼಸೋಜ ವಿಟ್ಲ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.