ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣ: ಸಿಟಿ ಬಸ್ ಚಾಲಕನಿಗೆ 6 ತಿಂಗಳು ಜೈಲು, ₹3,500 ದಂಡ

ಮಂಗಳೂರು: ಸಂಚಾರಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂಟನೇ ನ್ಯಾಯಾಲಯವು ಪಿಟಿಸಿ ಸಿಟಿ ಬಸ್ ಚಾಲಕ ಸೈಯದ್ ಇರ್ಫಾನ್ ಅಲಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ₹3,500 ದಂಡ ವಿಧಿಸಿ ಅಂತಿಮ ತೀರ್ಪು ನೀಡಿದೆ.

ಅಪಘಾತವು 2017 ರಲ್ಲಿ ಸಂಭವಿಸಿದ್ದು (ಕ್ರ. 226/2017, ಕಲಂ 279, 337, 338, 304 ಎ), ಆರೋಪಿ ಚಾಲಕ ಬಸ್ಸನ್ನು ಅತಿ ವೇಗದಲ್ಲಿ ಚಲಾಯಿಸಿ, ಮುಂದೆ ನಿಂತಿದ್ದ ಬಸ್ಸನ್ನು ಓವರ್ಟೇಕ್ ಮಾಡಿದ ನಂತರ, ಜಂಕ್ಷನ್ ಬಳಿ ಪಂಪ್‌ವೆಲ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ, ಲಾರಿ ಬಲಕ್ಕೆ ತಿರುಗಿ ಕಾರಿಗೆ ಅಪಘಾತ ಉಂಟಾಯಿತು. ಈ ವೇಳೆ ಬಸ್ಸಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಕವಿತಾ ಎಂಬ ಮಹಿಳೆ ಬಸ್ಸಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬಸ್ಸಿನ ಇತರ ಪ್ರಯಾಣಿಕರು ಗಾಯಗೊಂಡಿದ್ದು, ಚಾಲಕನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸ್ ತನಿಖೆ ಸಂಚಾರಿ ಪೊಲೀಸ್ ನಿರೀಕ್ಷಕ ಸುರೇಶ್ ಭಾಗಶಃ ಮತ್ತು ನಿರೀಕ್ಷಕ ಶಿವಪ್ರಕಾಶ್ ಎಚ್ ಸಂಪೂರ್ಣವಾಗಿ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪನ ಪತ್ರ ಸಲ್ಲಿಸಿದ್ದರು. ಸರಕಾರಿ ಸಹಾಯಕ ಅಭಿಯೋಜಕರಾಗಿ ನೇತ್ರಾವತಿ ಮತ್ತು ಗೀತಾ ರೈ, ವಾದ ಮಂಡನೆಗಾಗಿ ಆರೋನ್ ಡಿʼಸೋಜ ವಿಟ್ಲ ಭಾಗವಹಿಸಿದ್ದರು.

ಅಂತಿಮವಾಗಿ, ನ್ಯಾಯಾಧೀಶ ಫವಾಜ್ ಪಿ.ಎ ಚಾಲಕನ ಮೇಲೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದರು.

error: Content is protected !!