ಮಂಗಳೂರು: ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ(ಮಣೇಲ್)ಯಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನ ದೇವರಗುಡ್ಡೆ ಮಳಲಿ ಇದರ ನೀಲನಕ್ಷೆಯ ಬ್ಯಾನರನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ಇಂದು ಬೆಳಗ್ಗಿನ ಜಾವ ಬೆಳಕಿಗೆ ಬಂದಿದ್ದು, ಕೃತ್ಯದ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳಲಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪುನರ್ ನಿರ್ಮಾಣದ ಸಲುವಾಗಿ ದೇವಸ್ಥಾನ ಪ್ರವೇಶ ರಸ್ತೆಯ ಪಕ್ಕ ದೇವಸ್ಥಾನದ ವತಿಯಿಂದ ನೀಲನಕ್ಷೆಯ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್‌ಗೆ ಎರಡು ಕಡೆಗಳಲ್ಲಿ ಹಾನಿಗೊಳಿಸಿರುವುದು ಕಂಡುಬಂದಿದೆ. ಕಲ್ಲಿನಿಂದ ಗೀರಿ ಬ್ಯಾನರ್‌ಗೆ ಹಾನಿಗೊಳಿಸಿರುವಂತೆ ಕಂಡುಬಂದಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿಯ ವೇಳೆ ಕೃತ್ಯ ನಡೆಸಿರುವ ಬಗ್ಗೆ ಸ್ಥಳೀಯರು ಅನುಮಾನಿಸಿದ್ದಾರೆ. ಈ ಕುರಿತಂತೆ ದೇವಸ್ಥಾನ ಆಡಳಿತ ಸಮಿತಿ ಹಾಗೂ ಟ್ರಸ್ಟ್ ವತಿಯಿಂದ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಅಲ್ಲದೆ ದೇವರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ದೇವಸ್ಥಾನದವರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ದೇವಸ್ಥಾನದ ಗರ್ಭಗುಡಿಯ ಷಡಾದಾರ ಪ್ರತಿಷ್ಠೆ ನಡೆದಿದ್ದು, ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ.