“ಬಂಗಾರ್‌ ಒಲ್ಪ ಉಂಡು ಪನ್, ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” ವೃದ್ಧೆಯ ಮನೆಗೆ ನುಗ್ಗಿ ದರೋಡೆ: ನಾಲ್ವರಲ್ಲಿ ಮೂವರು ಬಂಧನ, ₹4.43 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಪ್ರದೇಶದಲ್ಲಿ 85 ವರ್ಷದ ವೃದ್ಧೆಯೊಬ್ಬರ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ₹4.43 ಲಕ್ಷ ಮೌಲ್ಯದ ಕಳುವಾದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ (21) , ನೋದ್ @ ಕೋತಿ @ ವಿನೋದ್ ಕುಮಾರ್ (33) ಹಾಗೂ ಗಿರೀಶ್ @ ಸೈಕಲ್ ಗಿರಿ (28) ಬಂಧಿತ ಆರೋಪಿಗಳು. ಜೈಸನ್ @ ಲೆನ್ಸನ್ ಕಾರ್ಕಳ ತಲೆರಮರೆಸಿಕೊಂಡಿರುವ ಆರೋಪಿ.

ಘಟನೆಯ ವಿವರ: ಮುಕ್ಕ, ಸುರತ್ಕಲ್‌ನ ಜಯಲಕ್ಷ್ಮೀ ನಿವಾಸದ ನಿವಾಸಿ ಜಲಜ (85) ಅವರು ನೀಡಿದ ದೂರಿನಂತೆ, ಡಿಸೆಂಬರ್ 3ರಂದು ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಅಪರಿಚಿತರು ಮನೆಯ ಬಾಗಿಲು ಬಡಿದು ‘ಕುಡಿಯಲು ನೀರು ಬೇಕು’ ಎಂದು ಹೇಳಿದ್ದರು. ಬಾಗಿಲು ತೆಗೆಯದೇ ಇದ್ದಾಗ ಆರೋಪಿತರು ಮನೆಯ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ, ತುಳುವಿನಲ್ಲಿ “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ?) ಎಂದು ಬೆದರಿಕೆ ಹಾಕಿ, ಕುತ್ತಿಗೆಗೆ ಬೈರಾಸು ಬಿಗಿದು , ʻಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್ ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ ಯಾರನ್ನಾದರೂ ಕರೆದರೆ ಕುತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ನಂತರ ಗೋದ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ ಹಾಗೂ ಪರ್ಸ್‌ನಲ್ಲಿದ್ದ ಸುಮಾರು ₹14,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 158/2025, ಕಲಂ 309(6) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ಪಿಎಸ್‌ಐ ರಘುನಾಯಕ್ ಹಾಗೂ ರಾಘವೇಂದ್ರ ನಾಯ್ಕ್ ಅವರ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿತು. ವಿಚಾರಣೆಯಲ್ಲಿ ಆತ ಜೈಸನ್ @ ಲೆನ್ಸನ್ ಕಾರ್ಕಳ ಎಂಬಾತನೊಂದಿಗೆ ದರೋಡೆ ನಡೆಸಿರುವುದಾಗಿ ಹಾಗೂ ಕಳುವಾದ ಬಂಗಾರವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆತನ ಹೇಳಿಕೆಯ ಮೇರೆಗೆ ಪೊಲೀಸರು ಬೆಂಗಳೂರಿಗೆ ತೆರಳಿ ವಿನೋದ್ @ ಕೋತಿ @ ವಿನೋದ್ ಕುಮಾರ್ ಹಾಗೂ ಗಿರೀಶ್ @ ಸೈಕಲ್ ಗಿರಿ ಎಂಬವರನ್ನು ಡಿಸೆಂಬರ್ 14ರಂದು ಬಂಧಿಸಿದರು. ಇವರಿಂದ ₹4.43 ಲಕ್ಷ ಮೌಲ್ಯದ ಕಳುವಾದ ಚಿನ್ನ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಹಾಗೂ ₹3,000 ನಗದು ಹಣವನ್ನು ಮಹಜರು ಮೂಲಕ ವಶಕ್ಕೆ ಪಡೆಯಲಾಗಿದೆ. ಜೈಸನ್ @ ಲೆನ್ಸನ್ ಕಾರ್ಕಳ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಶೈನ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ವಿನೋದ್ @ ಕೋತಿ ಮೇಲೆ ಬೆಂಗಳೂರು ಕೆ.ಎಸ್. ಲೇಔಟ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು, ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಗಿರೀಶ್ @ ಸೈಕಲ್ ಗಿರಿ ಮೇಲೂ ಕಗ್ಗಲಿಪುರ ಠಾಣೆಯಲ್ಲಿ ರೌಡಿ ಶೀಟ್ ಇದ್ದು, ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ.

ಬಂಧಿತ ಆರೋಪಿಗಳನ್ನು ಡಿಸೆಂಬರ್ 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆಯನ್ನು ಮಾನ್ಯ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ನೇತೃತ್ವದಲ್ಲಿ ಪಿಎಸ್‌ಐಗಳು, ಎಎಸ್‌ಐಗಳು ಹಾಗೂ ಠಾಣಾ ಸಿಬ್ಬಂದಿಯವರು ಯಶಸ್ವಿಯಾಗಿ ನಡೆಸಿದ್ದಾರೆ.

error: Content is protected !!