ಬೆಂಗಳೂರು : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ʻಕುಡುಕರʼ ವಿಚಾರವಾಗಿ ಬಿಸಿಬಿಸಿ ಚರ್ಚೆ ನಡೆದಿದೆ. ಕುಡುಕರ ಸಂಖ್ಯೆ ಜಾಸ್ತಿಯಾಗಿದ್ದು ಬಿಜೆಪಿ ಅವಧಿಯಲ್ಲೋ, ಕಾಂಗ್ರೆಸ್ ಸಮಯದಲ್ಲೋ? ಎಂದು ಆಡಳಿತ- ವಿಪಕ್ಷ ನಾಯಕರು ಚರ್ಚಿಸಿ ಚಳಿಯಲ್ಲೂ ಬೆವೆತುಕೊಂಡರು.

ವಿಪಕ್ಷ ನಾಯಕ ಆರ್. ಅಶೋಕ್ ಸದನಕ್ಕೆ ಕುಡುಕರನ್ನು ಎಳೆದು ತಂದು, ‘ಸಿಎಂ ಬಾಡಿ ಲ್ಯಾಂಗ್ಜ್ವೇಜ್ ಬದಲಾಗಿದೆ. ಭಾಷಣದ ವೇಳೆ ಜನರು ಏನನ್ನೇ ಕೇಳಿದರೂ ಎರಡು ಸಾವಿರ ಕೊಡ್ತಿದೀನಿ ಅನ್ನೋ ಉತ್ತರ. ಆದರೆ ಆ ಎರಡು ಸಾವಿರ ರೂಪಾಯಿ ಎಲ್ಲಿ ಬರುತ್ತಿದೆ? ಗಂಡನ ಜೇಬಿನಿಂದ! ಮದ್ಯ ಖರೀದಿಗೆ ಹೋಗುತ್ತಿದ್ದ ಹಣಕ್ಕೆ ಈಗ ತೆರಿಗೆ ಹಾಕಿ ಮಹಿಳೆಯರಿಗೆ ಕೊಡ್ತಿದ್ದೀರಿ’ ಎಂದು ಕಟುವಾಗಿ ಟೀಕಿಸಿದರು.‘ಒಂದು ಕ್ವಾಟರ್‌ಗೆ 50-60 ರೂಪಾಯಿ ಹೆಚ್ಚಿಸಿದ್ದಾರೆ. ಗಂಡನ ಹಣ ಕಿತ್ತುಕೊಂಡು ಹೆಂಡತಿಗೆ ಕೊಡ್ತಿರುವ ಸರ್ಕಾರಿ ಯೋಜನೆ ಇದು’ ಎಂದು ಆರ್. ಅಶೋಕ್ ಆರೋಪಿಸಿದರು.
ಇದೇ ಸಂದರ್ಭದಲ್ಲಿ ಎಚ್ ಕೆ ಪಾಟೀಲ್ ಮಾತನಾಡಿ, ‘ಆರ್ ಅಶೋಕ್ ಅವರು ಮಾತನಾಡುವ ದಾಟಿ ನೋಡಿದರೆ ಕುಡಿಯುವವರು ಉತ್ತರ ಕರ್ನಾಟಕದಲ್ಲಿ ಮಾತ್ರ ಇದ್ದಾರೆ ಎಂಬಂತಿದೆ. ಇದು ಸರಿಯಲ್ಲ. ಜೊತೆಗೆ ಗೃಹ ಲಕ್ಷ್ಮೀ ಹಣ ಶರಾಬು ಖರೀದಿಗೆ ಹೋಗ್ತಿಲ್ಲ. ಬಡತನ ನಿವಾರಣೆಗೆ ಹೋಗುತ್ತಿದೆ’ ಎಂದರು.
‘ನಾನು ಉತ್ತರ ಕರ್ನಾಟಕದ ಜನರು ಕುಡಿಯುತ್ತಾರೆ ಎಂದು ಹೇಳಿಲ್ಲ. ಆದರೆ ಮದ್ಯಕ್ಕೆ ತೆರಿಗೆ ಹೆಚ್ಚಿಸಿರುವುದು ಒಂದರ್ಥದಲ್ಲಿ ತೆರಿಗೆ ಭಯೋತ್ಪಾದನೆ. ಜನರ ಜೇಬಿಗೆ ಹೊರೆ ಹಾಕಿ ಸರ್ಕಾರ ಲಾಭ ನೋಡಿಕೊಳ್ಳುತ್ತಿದೆ’ ಎಂದು ಸರ್ಕಾರದ ತೆರಿಗೆ ನೀತಿಯನ್ನು ಆರ್.ಅಶೋಕ್ ಟೀಕಿಸಿದರು.

ಇದೇ ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ ಮಧ್ಯಪ್ರವೇಶ ಮಾಡಿ, ‘ಬೆಂಗಳೂರು ನಗರದಲ್ಲಿ ಕುಡಿಯುವವರ ಸಂಖ್ಯೆ ಏರಿಕೆ ಆಗಿದೆ. ಈ ಬಗ್ಗೆ ಅಂಕಿ ಅಂಶವಿದೆ. ಆರ್ ಅಶೋಕ್ ಅವರ ಕ್ಷೇತ್ರದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕುಡುಕರ ಸಂಖ್ಯೆ ಹೆಚ್ಚಾಗಿದೆ’ ಎಂದು ತಿರುಗೇಟು ನೀಡಿದರು.
ಶಿವಲಿಂಗೇಗೌಡ ತಕ್ಷಣವೇ ಮಧ್ಯಪ್ರವೇಶಿಸಿ, ‘ಬಿಜೆಪಿ ಆಡಳಿತದ ಅವಧಿಯಲ್ಲಿ ಜನರು ಕುಡಿಯುತ್ತಿರಲಿಲ್ಲವೇ? ಯಾವ ಕಾಲದಲ್ಲೂ ಜನರು ಕುಡಿದಿದ್ದಾರೆ. ಇದನ್ನು ರಾಜಕೀಯ ಬಣ್ಣಕ್ಕೆ ಹಚ್ಚುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.
‘ಬೆಂಗಳೂರು ನಗರದಲ್ಲಿ ಕುಡಿಯುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. ಅದೇ ವೇಳೆ ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಆಶೋಕ ಅವರ ಕ್ಷೇತ್ರದಲ್ಲೇ ಮದ್ಯಪಾನಿಗಳ ಸಂಖ್ಯೆ 1.6% ಹೆಚ್ಚಾಗಿದೆ‘ ಎಂದು ರಾಯರೆಡ್ಡಿ ಪ್ರತಿದಾಳಿ ನಡೆಸಿದರು.
ಬಿಜೆಪಿ–ಕಾಂಗ್ರೆಸ್ ಎರಡೂ ಕಡೆಗಳಿಂದಲೂ ಬಂದ ಮಾತುಗಳಿಗೆ ಸದನ ಕ್ಷಣಕ್ಷಣಕ್ಕೂ ಉದ್ವಿಗ್ನತೆಯಿಂದ ಕೂಡಿತ್ತು. ಮದ್ಯಪಾನದ ಬಳಕೆ ಯಾವ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿದೆ ಎಂಬ ಪ್ರಶ್ನೆ, ಅಭಿವೃದ್ಧಿ–ಬಡತನ ನಿವಾರಣೆ–ತೆರಿಗೆ ನೀತಿ–ಗೃಹಲಕ್ಷ್ಮಿ ಯೋಜನೆ ಎಂಬ ಬೃಹತ್ ಚರ್ಚೆಗೆ ತಿರುಗಿತು.
