ದಕ್ಷಿಣ ಕನ್ನಡ-ಉಡುಪಿ ಕೆಂಪು ಕಲ್ಲು, ಮರಳು ಸಮಸ್ಯೆ: ಸದನದ ಗಮನ ಸೆಳೆದ ಶಾಸಕ ಮಂಜುನಾಥ ಭಂಡಾರಿ

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಕೊರತೆಯಿಂದ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆ, ವಿಧಾನ ಪರಿಷತ್ತಿನಲ್ಲಿ ಶಾಸಕ ಮಂಜುನಾಥ ಭಂಡಾರಿ ಅವರು ಸರ್ಕಾರದ ಗಮನ ಸೆಳೆದರು. ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಪ್ರಶ್ನೆಗೆ ಉತ್ತರಿಸುತ್ತಾ ಸಮಸ್ಯೆಯ ವಾಸ್ತವ ಚಿತ್ರಣ, ಸರ್ಕಾರ ಕೈಗೊಂಡ ಕ್ರಮಗಳು ಮತ್ತು ನೀತಿ ತಿದ್ದುಪಡಿ ವಿವರವನ್ನು ಮಂಡಿಸಿದರು.

ಮುಖ್ಯವಾಗಿ ಭಂಡಾರಿ ಅವರು, ರಾಜ್ಯದಲ್ಲಿ ಮರಳುಗಾರಿಕೆ ನಿಯಮಗಳಲ್ಲಿ ಯಾವ ತಿದ್ದುಪಡಿಗಳನ್ನು ಮಾಡಲಾಗಿದೆ? ರಾಜ್ಯದಲ್ಲಿ ಈಗ ಕೆಂಪು ಕಲ್ಲು ಮತ್ತು ಮರಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿದೆಯೇ? ಅದರ ದರವನ್ನು ಹೇಗೆ ನಿಗದಿ ಮಾಡಲಾಗುತ್ತಿದೆ? ರಾಜಧನ ಕಡಿಮೆ ಮಾಡಿದರೂ ದರ ಏಕೆ ಕಡಿಮೆಯಾಗುತ್ತಿಲ್ಲ? ಉಭಯ ಜಿಲ್ಲೆಗಳಲ್ಲಿ ಕಲ್ಲು-ಮರಳು ಯೋಗ್ಯ ದರದಲ್ಲಿ ಸಿಗಲು ಯಾಮವ ನಿಯಂತ್ರಣಗಳನ್ನು ತೆಗೆದುಕೊಳ್ಳಲಾಗಿದೆ? ಗಣಿಗಾರಿಕೆ ಎಷ್ಟು ಸಮಿತಿಗಳನ್ನು ರಚಿಸಬೇಕಾಗಿದೆ? ಪದಾಧಿಕಾರಿಗಳು ಯಾರು? ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಎಲ್ಲ ಜಿಲ್ಲೆಗಳಲ್ಲಿ ಇದೆಯೇ? ಈ ಸಮಿತಿಗಳು ನಿಗದಿಯಂತೆ ಸಭೆ ಸೇರಿವೆಯೇ? ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸಲಾಗುತ್ತದೆಯೇ? ಎಂದು ಪ್ರಮುಖ ಪ್ರಶ್ನೆಗಳನ್ನು ಕೇಳಿ ಸರ್ಕಾರದ ಗಮನ ಸೆಳೆದರು.

S S MALLIKARJUNA

ನಿಯಮ ತಿದ್ದುಪಡಿ ಮತ್ತು ಮಾರುಕಟ್ಟೆ ದರದ ಬಗೆಗಿನ ಮಂಜುನಾಥ್‌ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು–1994ಕ್ಕೆ 2023, 2024 ಮತ್ತು 2025ರಲ್ಲಿ ಪ್ರಮುಖ ತಿದ್ದುಪಡಿಗಳು ಮಾಡಲಾಗಿದೆ. ರಾಜ್ಯದಲ್ಲಿ ಕೆಂಪು ಕಲ್ಲು–ಮರಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ದರ ನಿಗದಿಯನ್ನು ಗುತ್ತಿಗೆದಾರರ ವೆಚ್ಚ, ರಾಜಧನ, ಶುಲ್ಕಗಳು, ಸಾರಿಗೆ ಮತ್ತು ಲಾಭಾಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರಲ್ಲದೆ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಪ್ರತಿ ಮೆಟ್ರಿಕ್ ಟನ್ನಿಗೆ ರೂ. 850 ಮಾರಾಟ ದರ ನಿಗದಿಯಾಗಿದೆ ಎಂದು ಎಸ್.ಎಸ್. ಮಲ್ಲಿಕಾರ್ಜುನ ವಿವರಿಸಿದರು.

2025ರ ಸೆಪ್ಟೆಂಬರ್ 17ರಿಂದ ಕೆಂಪು ಕಲ್ಲಿಗೆ ಸಂಬಂಧಿಸಿದ ಶುಲ್ಕಗಳನ್ನು ಸರ್ಕಾರ ಕಡಿಮೆ ಮಾಡಿರುವುದಾಗಿ ಸಚಿವರು ತಿಳಿಸಿದ್ದಾರೆ. ಆದಾಗ್ಯೂ ಮಾರುಕಟ್ಟೆ ದರ ಕಡಿಮೆಯಾಗದಿರುವುದಕ್ಕೆ ವಿವಿಧ ವೆಚ್ಚಗಳು ಸೇರಿರುವುದು ಕೂಡಾ ಕಾರಣವೆಂದು ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ:

ದಕ್ಷಿಣ ಕನ್ನಡ–ಉಡುಪಿಯಲ್ಲಿ ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿಗಳ ಮೂಲಕ ಗುತ್ತಿಗೆದಾರರಿಗೆ ಹೊಸ ಶುಲ್ಕ ಜಾರಿಗೆ ಸಂಬಂಧಿಸಿದ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 74 ಕಾರ್ಯಾದೇಶಗಳು ಮತ್ತು 21 ಲೈಸೆನ್ಸ್‌ಗಳಡಿ ಕೆಂಪು(ಲ್ಯಾಟರೈಟ್‌) ಕಲ್ಲಿನ ಗಣಿಗಾರಿಕೆ ಚಾಲ್ತಿಯಲ್ಲಿದೆ. ಅಲ್ಲದೆ 16 ಮರಳು ಗುತ್ತಿಗೆಗಳು, 5 ಸರ್ಕಾರಿ ಕಾಮಗಾರಿಗಳ ಗುತ್ತಿಗೆಗಳು ಕಾರ್ಯನಿರ್ವಹಿಸುತ್ತಿವೆ 16 ಎಂ-ಸ್ಯಾಂಡ್ ಘಟಕಗಳು ಪೂರೈಕೆ ಮಾಡುತ್ತಿವೆ ಎಂದಿದ್ದಾರೆ.

ಉಡುಪಿ:

ಅದೇ ರೀತಿ ಉಡುಪಿಯಲ್ಲಿ 30 ಕಾರ್ಯಾದೇಶಗಳು ಹಾಗೂ 2 ಲೈಸೆನ್ಸ್‌ಗಳಡಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ನಾನ್‌ ಸಿಆರ್‌ಝಡ್(Non-CRZ) ಪ್ರದೇಶದಲ್ಲಿ 5 ಮರಳು ಗುತ್ತಿಗೆಗಳು, 8 ಮರಳು ಬ್ಲಾಕ್‌ಗಳು, 27 ಎಂ-ಸ್ಯಾಂಡ್ ಘಟಕಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಗ್ರಾಮ ಪಂಚಾಯತ್‌ಗಳ ಮೂಲಕ 33 ಕಾರ್ಯಾದೇಶಗಳಿವೆ ಎಂದಿದ್ದಾರೆ. ಸಚಿವರ ಪ್ರಕಾರ, ಈ ಪ್ರದೇಶಗಳಲ್ಲಿ ನಿರಂತರ ಪೂರೈಕೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಬಲಪಡಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ರಾಜ್ಯದಲ್ಲಿ ಗಣಿಗಾರಿಕೆ ಮೇಲ್ವಿಚಾರಣೆಗೆ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಟಾಸ್ಕ್‌ ಫೋರ್ಸ್, ಮರಳು ಸಮಿತಿಗಳು, ಕಲ್ಲು ಪುಡಿ ಘಟಕಗಳ ನಿಯಂತ್ರಣ ಪ್ರಾಧಿಕಾರ ಮುಂತಾದವು ಕಾರ್ಯನಿರ್ವಹಿಸುತ್ತಿವೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಖನಿಜ ಪ್ರತಿಷ್ಠಾನ (DMF) ಟ್ರಸ್ಟ್ ಅನ್ನು ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದ್ದು, ಸಂಬಂಧಿತ ಸಚಿವರು ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿಗಳು ಕಾರ್ಯದರ್ಶಿಯಾಗಿರುತ್ತಾರೆ. ಸ್ಥಳೀಯ ಶಾಸಕರು–ಸಂಸದರು ಸದಸ್ಯರಾಗಿರುತ್ತಾರೆ.

ಈ ಸಮಿತಿಗಳು ನಿಯಮಿತವಾಗಿ ಸಭೆ ಸೇರಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಕಲ್ಯಾಣ ಯೋಜನೆಗಳನ್ನು ಅನುಮೋದಿಸುತ್ತಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು.

ಕೆಂಪು ಕಲ್ಲು ಮತ್ತು ಮರಳಿನ ಕೊರತೆಯ ಬಗ್ಗೆ ಗಮನಾರ್ಹ ಚರ್ಚೆ ನಡೆಯಿದ್ದು, ನಿಯಮ ತಿದ್ದುಪಡಿ, ಶುಲ್ಕ ಇಳಿಕೆ ಮತ್ತು ಪೂರೈಕೆ ಸುಧಾರಣೆಗಾಗಿ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಮಾರುಕಟ್ಟೆ ದರ ಸ್ಥಿರೀಕರಣಕ್ಕೆ ಇನ್ನಷ್ಟು ನಿರ್ವಹಣಾ ಮತ್ತು ಮೇಲ್ವಿಚಾರಣೆಯ ಹಂತಗಳು ಅಗತ್ಯವಿರುವುದು ಸಚಿವರ ಉತ್ತರದಿಂದ ಸ್ಪಷ್ಟವಾಗುತ್ತದೆ.

error: Content is protected !!