ಕಾರ್ಕಳ: ನಲ್ಲೂರಿನ ಅಶ್ರಫ್ ಎಂಬಾತನ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಲ್ಲಿ ಗೋಮಾಂಸ ಪತ್ತೆ ಪ್ರಕರಣದ ತನಿಖೆಯ ಹಂತದಲ್ಲಿ ಅಚ್ಚರಿಯ ತಿರುವು ದೊರೆತಿದೆ. ಗೋವುಗಳನ್ನು ಅಶ್ರಫ್ ಅಲಿಗೆ ಪೂರೈಸುತ್ತಿದ್ದ ವ್ಯಕ್ತಿ ಸಂಘಪರಿವಾರದ ಕಾರ್ಯಕರ್ತನಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಸಂಘಪರಿವಾರದ ಕಾರ್ಯಕರ್ತ, ಗೋವುಗಳನ್ನು ಖರೀದಿಸಿ, ಕಸಾಯಿಖಾನೆಗೆ ಮಾರುತ್ತಿದ್ದ ಶಿವಪ್ರಸಾದ್ ಬಂಧಿತ ಆರೋಪಿ.

ಬಂಧಿತ ಶಿವಪ್ರಸಾದ್ ಗೋವುಗಳ ಬ್ರೋಕರ್ ಆಗಿದ್ದು, ಸಾಕು ದನ ಹಾಗೂ ಕರುಗಳನ್ನು ಖರೀದಿಸಿ ಹೆಚ್ಚಿನ ದರಕ್ಕೆ ಕಸಾಯಿಖಾನೆಗಳಿಗೆ ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿದ್ದನು. ವಿಚಾರಣೆಯ ವೇಳೆ, ಅಕ್ರಮ ಕಸಾಯಿಖಾನೆಗೆ ಅಗತ್ಯವಾದ ಗೋವಿನ ಸರಬರಾಜನ್ನು ನೇರವಾಗಿ ತಾನೇ ಅಶ್ರಫ್ ಅಲಿಗೆ ಮಾಡುತ್ತಿದ್ದೆನೆಂದೂ ಒಪ್ಪಿಕೊಂಡಿದ್ದಾನೆ.

ಇದೇ ವೇಳೆ, ತಾನು ಮಾರಾಟ ಮಾಡುತ್ತಿದ್ದ ಗೋವುಗಳ ಮಾಹಿತಿ—ಯಾರಿಗೆ ಗೋವುಗಳನ್ನು ನೀಡುತ್ತಿದ್ದೆನೆಂಬುದನ್ನೂ ಸಂಘಪರಿವಾರದ ಕೆಲವು ವ್ಯಕ್ತಿಗಳಿಗೆ ತಿಳಿಸುತ್ತಿದ್ದೆನೆಂಬ ಸಂಗತಿಯೂ ತನಿಖೆಯಲ್ಲಿ ಹೊರಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಪ್ರಸಾದ್‌ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ಹಿಂದಿನ ವಿವರ
ನವೆಂಬರ್ 11ರಂದು ನಲ್ಲೂರಿನ ಅಶ್ರಫ್ ಅಲಿ ಮನೆಯಲ್ಲಿ ಅಕ್ರಮ ಕಸಾಯಿಖಾನೆಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಪತ್ತೆಹಚ್ಚಿದ್ದರು. ಸ್ಥಳ ಪರಿಶೀಲನೆಯ ವೇಳೆ ಸುಮಾರು 60 ಕೆ.ಜಿ. ಮಾಂಸ, ಕಟ್ಟಿ ಹಾಕಲಾಗಿದ್ದ ಹೋರಿ, ರಕ್ತದ ಹಾಗೂ ದನದ ತ್ಯಾಜ್ಯ ಪತ್ತೆಯಾಗಿದ್ದು ಪ್ರಕರಣ ದಾಖಲಿಸಲಾಗಿತ್ತು.
ದಾಳಿಯ ನಂತರ ಹಲವು ಹಿಂದುಪರ ಸಂಘಟನೆಗಳು ಅಶ್ರಫ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದವು. ಆದರೆ ಈಗ ಪೂರೈಕೆದಾರನೇ ಸಂಘಪರಿವಾರದ ಕಾರ್ಯಕರ್ತ ಎನ್ನುವುದು ಬೆಳಕಿಗೆ ಬಂದಿದ್ದು, ಇಂಥಾ ಅದೆಷ್ಟು ಮಂದಿ ಗೋಮುಖ ವ್ಯಾಘ್ರರು ಇರಬಹುದೆಂದು ಗೋಪ್ರಿಯರು ಆಲೋಚನೆ ಮಾಡುವಂತಾಗಿದೆ.
