ಮಂಗಳೂರು: ಸದುದ್ದೇಶದಿಂದ ಮಾಡುವ ಕೆಲವೊಂದು ಕಾರ್ಯಗಳು ಹೇಗೆ ಎಡವಟ್ಟಾಗಿ ಪರಿಣಮಿಸುತ್ತದೆ ಎನ್ನುವುದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ. ಮಂಗಳೂರಿನ ಲಾಲ್‌ಭಾಗ್ ಸಿಗ್ನಲ್ ಹತ್ತಿರ ಮಹಾನಗರ ಪಾಲಿಕೆಯೊಂದು ಬ್ಯಾನರ್ ಹಾಕಿದೆ. ʻಇಲ್ಲಿ ಯಾವುದೇ ಬ್ಯಾನರ್ ಅಳವಡಿಸಬಾರದುʼ ಎಂದು ಬ್ಯಾನರ್ ಹಾಕಿಯೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಪಾಲಿಕೆ ಮಾಡಿದೆ.



ಪಾಲಿಕೆ ಬ್ಯಾನರ್ ಹಾಕಿದ ಸ್ಥಳದಲ್ಲಿಯೇ ಯಾವುದೇ ಬ್ಯಾನರ್, ಕಟೌಟ್ ಅಳವಡಿಸಬಾರದಂತೆ. ಯಾರಾದರೂ ಬ್ಯಾನರ್ ಅಳವಡಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದಂತೆ. ಹಾಗಾದರೆ ʻಬ್ಯಾನರ್ ಹಾಕಬೇಡಿʼ ಎಂದು ಬ್ಯಾನರ್ ಹಾಕಿದವರಿಗೆ ಪಾಲಿಕೆ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಇಲ್ಲಿರುವ ಕುತೂಹಲ.

ನಗರದಲ್ಲಿ ಬ್ಯಾನರ್, ಬಂಟಿಂಗ್ಸ್ ಅಳವಡಿಸಬಾರದೆಂದು ದೊಡ್ಡದೊಂದು ಚಳವಳಿಯೇ ನಡೆಯುತ್ತದೆ. ಕಂಬಳ, ಯಕ್ಷಗಾನ, ಜಾತ್ರೆ, ಬ್ರಹ್ಮಕಲಶ ಇಂಥಾ ಬ್ಯಾನರ್ ಹಾಕಿದರೆ ಕ್ರಮ ಕೈಗೊಳ್ಳುವ ಪಾಲಿಕೆ ರಾಜಕಾರಣಿಗಳು ಹಾಕುವ ಯಾವುದೇ ಬ್ಯಾನರ್‌ಗಳಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಆದರೆ ಯಾರೂ ಸಿಗ್ನಲ್ ಹತ್ತಿರ ಬ್ಯಾನರ್ ಹಾಕುವ ಹುಚ್ಚು ಸಾಹಸ ಮಾಡಲಾರರು. ಆದರೂ ಈ ಜಾಗದಲ್ಲಿಯೇ ಬ್ಯಾನರ್ ಅಳವಡಿಸುವ ಮೂಲಕ ಪಾಲಿಕೆ ʻಅತಿಬುದ್ಧಿವಂತಿಕೆʼ ತೋರಿಸಿದೆ ಎಂದು ಸಾರ್ವಜನಿಕರು ಸಿಗ್ನಲ್ ಹತ್ತಿರ ವಾಹನ ನಿಲ್ಲಿಸುವಾಗ ಯೋಚಿಸಿಕೊಂಡು ಹೋಗುವಂತಾಗಿದೆ.
