ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ, ಭಾರತದಿಂದ ಅಕ್ಕಿ ಮತ್ತು ಕೆನಡಾದಿಂದ ರಸಗೊಬ್ಬರ ಆಮದುಗಳ ಮೇಲೆ ದುಬಾರಿ ಸುಂಕ ವಿಧಿಸುವ ಸೂಚನೆ ನೀಡಿದರು. ಅಮೆರಿಕಾ ರೈತರಿಗೆ ಬಹು-ಶತಕೋಟಿ ಡಾಲರ್ ಪರಿಹಾರ ಪ್ಯಾಕೇಜ್ ಅನಾವರಣ ಮಾಡುವ ಸಂದರ್ಭದಲ್ಲಿ, ಟ್ರಂಪ್ ಅಮೆರಿಕಾದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕಟುವಾಗಿ ಮಾತನಾಡಿದರು.

“ಅಮೆರಿಕದ ರೈತರು ನಮ್ಮ ರಾಷ್ಟ್ರದ ಬೆನ್ನೆಲುಬು. ಅವರಿಗೆ ನ್ಯಾಯ ಸಿಗಲೆಂದು ನಾವು ಸುಂಕಗಳನ್ನು ವಿಧಿಸುತ್ತೇವೆ. ಅಮೆರಿಕಾ ಸರ್ಕಾರವು $12 ಬಿಲಿಯನ್ ಕೃಷಿ ಸಹಾಯ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಈ ಹಣ ಯುಎಸ್ ವ್ಯಾಪಾರ ಪಾಲುದಾರರಿಂದ ಸಂಗ್ರಹಿಸಿದ ಸುಂಕದ ಆದಾಯದಿಂದ ಲಭ್ಯವಾಗಲಿದೆ” ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಭಾರತದ ಅಕ್ಕಿ ಆಮದು ಕುರಿತು ಮಾತನಾಡಿದ ಟ್ರಂಪ್, “ಭಾರತ ನಮ್ಮ ದೇಶದಲ್ಲಿ ಅಕ್ಕಿಯನ್ನು ತಂದು ಸುರಿಯುತ್ತದೆ. ಇದರಿಂದ ಅಮೆರಿಕಾ ಅಕ್ಕಿ ಉತ್ಪಾದಕರಿಗೆ ಗಂಭೀರ ಹೊಡೆತ ನೀಡಿದೆ. ಭಾರತೀಯ ಸಂಸ್ಥೆಗಳು ಅಮೆರಿಕದ ಅಕ್ಕಿ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಂಡಿದೆ. ದುಬಾರಿ ಸುಂಕ ವಿಧಿಸುವ ಮೂಲಕ ಈ ಸಮಸ್ಯೆಯನ್ನು ಎರಡು ನಿಮಿಷಗಳಲ್ಲಿ ಪರಿಹರಿಸಬಹುದು” ಎಂದು ಹೇಳಿದರು.
ಕೆನಡಾದಿಂದ ಆಗುವ ರಸಗೊಬ್ಬರ ಆಮದುಗಳ ವಿಷಯದಲ್ಲೂ ಟ್ರಂಪ್ ಕಠಿಣ ನಿಲುವು ತಾಳಿದರು. “ಸ್ಥಳೀಯ ಉತ್ಪಾದನೆ ಬಲವಾಗಬೇಕು. ಅಗತ್ಯವಿದ್ದರೆ ಕೆನಡಾದ ರಸಗೊಬ್ಬರಗಳ ಮೇಲೂ ತೀವ್ರ ಸುಂಕ ವಿಧಿಸಲಾಗುತ್ತದೆ” ಎಂದು ಅವರು ಹೇಳಿದರು.
ಕಳೆದ ದಶಕದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಕೃಷಿ ವ್ಯಾಪಾರ ವಿಸ್ತರಿಸಿದರೂ, ಸಬ್ಸಿಡಿಗಳು, ಮಾರುಕಟ್ಟೆ ಪ್ರವೇಶ ಮತ್ತು WTO ದೂರುಗಳು — ವಿಶೇಷವಾಗಿ ಅಕ್ಕಿ ಮತ್ತು ಸಕ್ಕರೆ ಕುರಿತ ವಿವಾದಗಳು — ದ್ವಿಪಕ್ಷೀಯ ಮಾತುಕತೆಗಳನ್ನು ಅಸ್ತವ್ಯಸ್ತಗೊಳಿಸುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್‌ನ ಹೊಸ ಎಚ್ಚರಿಕೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿರುವುದರಿಂದ ಆಕ್ರೋಶಗೊಂಡಿರುವ ಟ್ರಂಪ್ ಭಾರತದ ಅಕ್ಕಿ ಮೇಲೆ ಕಿಡಿಕಾರಿದ್ದಾರೆ ಎನ್ನಲಾಗುತ್ತಿದೆ.
