ಸುರತ್ಕಲ್: ಬಾಂಗ್ಲಾದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕಬ್ಬಡ್ಡಿ ಕಪ್ ತಂಡವನ್ನು ಪ್ರತಿನಿಧಿಸಿದ ದಕ್ಷಿಣ ಭಾರತದ ಏಕೈಕ ಆಟಗಾರ್ತಿ ಸುರತ್ಕಲ್ ನ ಧನಲಕ್ಷ್ಮಿ ಪೂಜಾರಿ ಅವರಿಗೆ ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಸುರತ್ಕಲ್ ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ನಡೆಯಿತು.

ಸುಮಾರು 60ಕ್ಕೂ ಅಧಿಕ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮಿ ಪೂಜಾರಿ ಅವರು ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಾಯಗೊಂಡ ಸಂದರ್ಭ ಶಾಸಕರು ನೀಡಿದ ನೆರವನ್ನು ಸ್ಮರಿಸಿಕೊಂಡರಲ್ಲದೆ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಹಕಾರ ನೀಡಿದ ತರಬೇತುದಾರರು, ಸಂಘ ಸಂಸ್ಥೆಗಳ ನೆರವನ್ನು ಮತ್ತು ಡಾ ಮೋಹನ್ ಆಳ್ವರು ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು.
ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಅನೇಕ ಸಂದರ್ಭದಲ್ಲಿ ಗಾಯಗೊಂಡರೂ ಛಲ ಬಿಡದೆ ಮತ್ತೆ ಮತ್ತೆ ತರಬೇತಿಯನ್ನು ಪಡೆಯುವ ಮೂಲಕ ಇಂದು ವಿಶ್ವ ಚಾಂಪಿಯನ್ ತಂಡವನ್ನು ಪ್ರತಿನಿಧಿಸುವ ಮೂಲಕ ನಮ್ಮ ಕ್ಷೇತ್ರ, ಜಿಲ್ಲೆ, ರಾಜ್ಯ ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ. ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನು ಎದುರಿಸುತ್ತ ಓದಿನ ಜೊತೆಗೆ ತನ್ನ ನೆಚ್ಚಿನ ಕಬ್ಬಡಿ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವುದು ಎಲ್ಲಾ ಕ್ರೀಡಾಪಟುಗಳಿಗೂ ಮಾದರಿಯಾದ ಸಾಧನೆಯಾಗಿದೆ ಎಂದು ಶ್ಲಾಘಿಸಿದರು. ಭವಿಷ್ಯದಲ್ಲಿ ಉದ್ಯೋಗವಿರಲಿ, ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ಪ್ರಮುಖರಾದ ಮಹಾಬಲ ಪೂಜಾರಿ ಕಡಂಬೋಡಿ ಅವರು ಶುಭ ಹಾರೈಸಿದರು. ಪ್ರಮುಖರಾದ ರಾಜೇಶ್ ಕೊಟ್ಟಾರಿ, ಧನಲಕ್ಷ್ಮೀ ಪೂಜಾರಿ ಅವರ ತಂದೆ ನಾರಾಯಣ ಪೂಜಾರಿ, ತಾಯಿ ಶಶಿಕಲಾ ಪೂಜಾರಿ, ಇಡ್ಯಾ ಬಿಲ್ಲವ ಸಂಘದ ಯಮುನಾ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಕೇಶವ ಕುಂದರ್ ಶ್ರೀ ರಂಗ ಎಚ್., ಬಾಬು ಚಂದ್ರ ಐ,ಲೋಕೇಶ್ ಗುರಿಕಾರರು, ಯಶವಂತ ದೇವಾಡಿಗ,ದಿನೇಶ್ ಎಲ್ ಬಂಗೇರ,ಆನಂದ್ ಭಂಡಾರಿ,ಓಂ ಪ್ರಕಾಶ್ ಶೆಟ್ಟಿಗಾರ್ ರೋಹಿತಶ್ವ, ಯಜ್ಞೆಶ್ ಆಚಾರ್ಯ, ರೇವತಿ ಕುಳಾಯಿ, ಭರತ್ ರಾಜ್ ಕೃಷ್ಣಾಪುರ, ಬಿಜೆಪಿ ಪದಾಧಿಕಾರಿಗಳು, ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಶರತ್ ಕೃಷ್ಣಾಪುರ ಸ್ವಾಗತಿಸಿದರು, ಮಂಜುಳಾ ಶೆಟ್ಟಿ ನಿರೂಪಿಸಿದರು, ವಿಠಲ ಸಾಲ್ಯಾನ್ ವಂದಿಸಿದರು.