ಮಂಗಳೂರು: ಆಲ್ ಇಂಡಿಯಾ ಕಥೊಲಿಕ್ ಯೂನಿಯನ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರು ಇಂದು ಡಿಸೆಂಬರ್ 5ರಂದು ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ಪ್ರಮೋದ್ ಮುತಾಲಿಕ್ ಹಾಗೂ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರ ಇತ್ತೀಚಿನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. “ಭಾರತದಲ್ಲಿ ಕ್ರೈಸ್ತರು ವೈದ್ಯಕೀಯ, ಶಿಕ್ಷಣ, ಮಾನವೀಯತೆಯ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ,” ಎಂದು ಅವರು ಉಲ್ಲೇಖಿಸಿದ್ದಾರೆ.

ಮುತಾಲಿಕ್ ಅವರು ಕ್ರಿಸ್ಮಸ್ ರಜೆಯನ್ನು ಕಡಿತಗೊಳಿಸಬೇಕು ಅಥವಾ ಶಾಲೆಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದನ್ನು ಟೀಕಿಸಿದ ಆಲ್ವಿನ್ ಡಿಸೋಜ ಪಾನೀರ್ ಅವರು “ಶಾಲೆಗಳಿಗೆ ಬೀಗ ಹಾಕುವುದಾಗಿ ಬೆದರಿಕೆ ಹಾಕುವ ಹಕ್ಕು ಯಾರಿಗೂ ಇಲ್ಲ. ಭಾರತದ ಅತೀ ಹೆಚ್ಚು ವಿದ್ಯಾರ್ಥಿಗಳು ಕ್ರೈಸ್ತ ಸಂಸ್ಥೆಗಳತ್ತ ಹರಿಯುವುದಕ್ಕೆ ಕಾರಣ ಅವರ ಶಿಕ್ಷಣದ ಗುಣಮಟ್ಟ. ರಜೆಯ ವಿಚಾರದಲ್ಲಿ ಬೆದರಿಕೆ ಭಾಷೆ ಬಳಕೆ ಮಾಡುವುದು ಸುಸಂಬೋಧನೆಯ ಮಾರ್ಗವಲ್ಲ” ಎಂದು ಹೇಳಿದ್ದಾರೆ.
ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಕುರಿತು ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ನೀಡಿದ ಹೇಳಿಕೆಗಳು ಅಸಂಗತವಾಗಿವೆ ಎಂದು ಅವರು ಹೇಳಿದ್ದಾರೆ. “ಕಾನ್ವೆಂಟ್ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ದೇಶಕ್ಕೆ ದ್ರೋಹ ಮಾಡಿಲ್ಲ; ದೇಶ ಕಟ್ಟುವ ಕಾರ್ಯದಲ್ಲಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಲ್ವಿನ್ ಡಿ ಸೋಜ ಪಾನೀರ್ ಅವರು ಈ ಹೇಳಿಕೆಗಳನ್ನು “ಅವಹೇಳನಕಾರಿ ಮತ್ತು ಅಸಂಗತ” ಎಂದು ವರ್ಣಿಸಿ, ಆಡಳಿತವು ಇಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ. ಇವರೀರ್ವರ ಮೇಲೆ ಸರಕಾರವು ಸೋ-ಮೋಟೋ ಕೇಸ್ ದಾಖಲಿಸಿ ಇಬ್ಬರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕ್ರೈಸ್ತ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರು, ಆಡಳಿತಗಾರರು ಮತ್ತು ಯೋಧರನ್ನು ಉದಾಹರಿಸಿದ ಅವರು, “ಬಿಜೆಪಿ ಹಿರಿಯರು, ಸಂಸದರು, ಮಾಜಿ ಕೇಂದ್ರ ಮಂತ್ರಿಗಳು ಮತ್ತು ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸುವ ಹಲವು ನಾಯಕರೂ ಕ್ರೈಸ್ತ ಶಿಕ್ಷಣ ಪಡೆದವರೇ” ಎಂದು ಹೇಳಿದ್ದಾರೆ. “ಅವರು ಭಯೋತ್ಪಾದಕರು ಆಗಿದ್ದಾರೆಯೇ? ಅವರ ಸಾಧನೆಗಳು ರಾಷ್ಟ್ರಕ್ಕೆ ಹೆಮ್ಮೆ ಅಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
ಕೋಟಿಗಟ್ಟಲೆ ವಿದ್ಯಾರ್ಥಿಗಳು ಕ್ರೈಸ್ತ ಶಾಲೆಗಳಲ್ಲಿ ಕಲಿತಿದ್ದಾರೆ ಕಲಿಯುತ್ತಲೂ ಇದ್ದಾರೆ. ಬಿಜೆಪಿ ಪಕ್ಷದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು, ಮಾಜಿ ಗೃಹಮಂತ್ರಿ ಎಲ್.ಕೆ. ಅಡ್ವಾನಿ, ಜೆ.ಪಿ. ನಡ್ದ, ಅರುಣ್ ಜೇಟ್ಲಿ, ಮನೋಹರ್ ಪರಿಕರ್, ದೇಶ ಕಾಯುವ ಯೋಧ ಮಂಗಳೂರಿನ ಸಂಸದ ಬ್ರಿಜೇಶ್ ಚೌಟ, ಪಿಯುಸ್ ಗೋಯೆಲ್ – ಇವರೆಲ್ಲಾ ಕ್ರೈಸ್ತ ಶಾಲೆಗಳಲ್ಲಿ ಕಲಿತವರು. ನೀವು ತಿಳಿಸಿದಂತೆ ಇವರೆಲ್ಲ ಭಯೋತ್ಪಾದಕರೆ? ಅವರೇಕೆ ಭಯೋತ್ಪಾದಕ ರಾಗಲಿಲ್ಲ? ನೀಡಿದ ಹೇಳಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಹಾಗೆಯೇ ಈ ಎಲ್ಲಾ ನಾಯಕರು ಯಾಕೆ ಮೌನ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಅವರನ್ನು “ಶಿಸ್ತಿನ ಸಿಪಾಯಿ” ಎಂದು ಕೊಂಡಾಡಿದ ಆಲ್ವಿನ್ ಡಿಸೋಜರವರು, “ಕಾನ್ವೆಂಟ್ ಶಿಕ್ಷಣವೇ ಅವರ ಶಿಸ್ತಿನ, ಮನೋಭಾವದ ಮತ್ತು ವ್ಯಕ್ತಿತ್ವದ ಬುನಾದಿ” ಎಂದು ಹೇಳಿದ್ದಾರೆ.
ಕೊರೊನಾ, ಏಡ್ಸ್, ಕುಷ್ಠರೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮತ್ತು ವೈದ್ಯರು ನೀಡಿದ ಸೇವೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. “ಸಂಕಷ್ಟಗಳ ವೇಳೆ ಕ್ರೈಸ್ತ ಸಮುದಾಯದ ವೈದ್ಯರು ಜೀವ ಉಳಿಸಲು ಹಗಲು-ರಾತ್ರಿ ಶ್ರಮಿಸಿದ್ದಾರೆ. ಇವರೆಲ್ಲರ ಸೇವೆಗೆ ಗೌರವ ಸಲ್ಲಿಸಬೇಕೇ ಹೊರತು ಅವಹೇಳನ ಬೇಡ,” ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಮಾಜ ವೈಮನಸ್ಯಕ್ಕೆ ಕಾರಣವಾಗುವ ಹೇಳಿಕೆಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. “ಸಮುದಾಯವನ್ನು ಒಡೆಯುವ ಭಾಷಣಗಳನ್ನು ತಕ್ಷಣ ನಿಲ್ಲಿಸಬೇಕು. ಅಗತ್ಯವಿದ್ದಲ್ಲಿ ಸೋ-ಮೋಟೋ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.