ಪುಣೆ: ಭಾರತೀಯ ವಿಜ್ಞಾನಿಗಳು ಬ್ರಹ್ಮಾಂಡದ ಇತಿಹಾಸದಲ್ಲಿ ಗಮನಾರ್ಹವಾದ ಆವಿಷ್ಕಾರವನ್ನು ಮಾಡಿದ್ದಾರೆ. ಪುಣೆಯ ರಾಷ್ಟ್ರೀಯ ರೇಡಿಯೋ ಆಸ್ಟ್ರೋಫಿಸಿಕ್ಸ್ ಕೇಂದ್ರ (NCRA–TIFR) ಸಂಶೋಧಕರಾದ ರಾಶಿ ಜೈನ್ ಮತ್ತು ಪ್ರೊ. ಯೋಗೇಶ್ ವಡಡೇಕರ್ ಅವರು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಬಳಸಿ 12 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ‘ಅಲಕನಂದಾ’ ಎಂಬ ಭವ್ಯ ನಕ್ಷತ್ರಪುಂಜವನ್ನು ಪತ್ತೆ ಹಚ್ಚಿದ್ದಾರೆ.

ಯುರೋಪಿಯನ್ ಜರ್ನಲ್ ಆಫ್ ಆಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಬ್ರಹ್ಮಾಂಡ ನಿರ್ಮಾಣವಾದ ನಂತರ ಕೇವಲ 1.5 ಶತಕೋಟಿ ವರ್ಷಗಳಲ್ಲಿ ಈ ಗೆಲಕ್ಸಿ ರೂಪುಗೊಂಡಿದೆ. ಇಷ್ಟು ಪ್ರಾಚೀನ ಯುಗದಲ್ಲಿ ಸಾಮಾನ್ಯವಾಗಿ ಗೆಲಕ್ಸಿಗಳು ಅಸ್ಥಿರವಾಗುತ್ತವೆ, ಅಸ್ಪಷ್ಟ ಆಕಾರದಲ್ಲಿರುತ್ತವೆ. ಆದರೆ ಅಲಕನಂದಾವು ಮಾತ್ರ ಆಶ್ಚರ್ಯಕಾರಿಯಾಗಿ ಕ್ಷೀರಪಥದಂತೆಯೇ ಎರಡು ಸುರುಳಿ ತೋಳುಗಳಿರುವ ‘ಗ್ರ್ಯಾಂಡ್ ಡಿಸೈನ್ ಸ್ಪೈರಲ್’ ಗೆಲಕ್ಸಿಯಾಗಿ ಕಂಡುಬಂದಿದೆ.
ಸುಮಾರು 30,000 ಬೆಳಕಿನ ವರ್ಷಗಳ ಅಗಲ ಮತ್ತು 10 ಶತಕೋಟಿಗೂ ಹೆಚ್ಚು ನಕ್ಷತ್ರಗಳನ್ನು ಹೊಂದಿರುವ ಈ ಗೆಲಕ್ಸಿ ವಿಜ್ಞಾನಿಗಳಿಗೆ ದೊಡ್ಡ ಕುತೂಹಲ ಮೂಡಿಸಿದೆ. “ಬಿಗ್ ಬ್ಯಾಂಗ್ ನಂತರ ಇಷ್ಟು ಬೇಗ ಸುರುಳಿ ತೋಳುಗಳನ್ನು ಹೊಂದಿದ ದೊಡ್ಡ ಗೆಲಕ್ಸಿ ಹೇಗೆ ರೂಪುಗೊಂಡಿತು ಎಂಬುದೇ ಅಚ್ಚರಿ,” ಎಂದು ಪ್ರೊ. ವಡಡೇಕರ್ ಹೇಳಿದರು. ಅಲಕನಂದಾದಲ್ಲಿ ಹೊಸ ನಕ್ಷತ್ರಗಳು ಕ್ಷೀರಪಥಕ್ಕಿಂತ 20–30 ಪಟ್ಟು ವೇಗದಲ್ಲಿ ರೂಪುಗೊಳ್ಳುತ್ತಿರುವುದನ್ನು ಅಧ್ಯಯನ ಹೇಳಿದೆ.

70,000ಕ್ಕೂ ಹೆಚ್ಚು ಆಕಾಶ ವಸ್ತುಗಳ ವಿವರಗಳನ್ನು ಪರಿಶೀಲಿಸುವಾಗ ರಾಶಿ ಜೈನ್ ಈ ವಿಶೇಷ ಗೆಲಕ್ಸಿಯನ್ನು ಗುರುತಿಸಿದರು. “ಸುರುಳೀ ತೋಳುಗಳ ಮೇಲೆ ‘ಮಣಿಯ ಸರ’ದಂತಿರುವ ನಕ್ಷತ್ರ ಗುಂಪುಗಳ ವಿನ್ಯಾಸವು ಇಂದು ಹತ್ತಿರದ ಗೆಲಕ್ಸಿಗಳಲ್ಲಿರುವ ಮಾದರಿಯಂತೆಯೇ ಇದೆ,” ಎಂದು ಅವರು ಹೇಳಿದರು.
ಅಲಕಾನಂದ ಹೆಸರೇಕೆ?
ಮಂದಾಕಿನಿ (ಕ್ಷೀರಪಥ) ನದಿಯ ಹೆಸರಿನೊಂದಿಗೆ ಸಂಬಂಧ ಹೊಂದಿರುವುದರಿಂದ ಈ ಹೊಸ ಗೆಲಕ್ಸಿಗೆ ‘ಅಲಕನಂದಾ’ ಎಂಬ ನಾಮಕರಣ ಮಾಡಲಾಗಿದೆ. ಅಲಕನಂದಾ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಚಿಲಿಯ ALMA ವೀಕ್ಷಣಾಲಯ ಸೇರಿದಂತೆ ಇನ್ನಷ್ಟು ಬಾಹ್ಯಾಕಾಶ ಯಂತ್ರೋಪಕರಣಗಳ ಮೂಲಕ ಮುಂದಿನ ಅಧ್ಯಯನ ನಡೆಯಲಿದೆ. ಈ ಪತ್ತೆ, ಆರಂಭಿಕ ಬ್ರಹ್ಮಾಂಡದ ರಚನಾ ವೇಗದ ಕುರಿತು ವಿಜ್ಞಾನ ಸಮುದಾಯ ಹೊಂದಿದ್ದ ಹಲವಾರು ನಂಬಿಕೆಗಳನ್ನು ಪುನರ್‌ವಿಮರ್ಶೆಗೆ ಒಳಪಡಿಸುವ ಸಾಧ್ಯತೆಯಿದೆ.
