ಮಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಹಂಪನಕಟ್ಟೆಯಲ್ಲಿ ರೂ. 5.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಂಪ್ಯೂಟರ್ ಪ್ರಯೋಗಾಲಯದ ಕೊಠಡಿಯನ್ನು ಶಾಸಕ ಡಿ.ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು.

ನಂತರ ಮಾತನಾಡಿದ ಶಾಸಕರು, 2025-26 ನೇ ಸಾಲಿನಿಂದ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಪ್ರಾರಂಭಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯವಿರುವ ಅನೇಕ ವಿಷಯಗಳ ಬಗ್ಗೆ ಕಾಲೇಜಿನವರು ನನ್ನ ಬಳಿ ಮನವಿ ಮಾಡಿದ್ದರು. ಅದರಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಕಂಪ್ಯೂಟರ್ ಹಾಗೂ ಸುಸಜ್ಜಿತ ಪ್ರಯೋಗಾಲಯವನ್ನು ನಿರ್ಮಿಸಿ ಇದೀಗ ಲೋಕಾರ್ಪಣೆಗೊಳಿಸಲಾಗಿದೆ. ಈ ವೇಳೆ ನಮ್ಮ ಮನವಿಗೆ ಸ್ಪಂದಿಸಿ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿರುವ ಯೂನಿಫೈ ಸಿ.ಎಕ್ಸ್ (ದಿಯಾ ಸಿಸ್ಟಮ್ಸ್) ಮಂಗಳೂರು ಇವರಿಗೂ ನನ್ನ ವಿಶೇಷ ಧನ್ಯವಾದಗಳು. ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವಂತಾದರೆ ನಮ್ಮೆಲ್ಲರ ಶ್ರಮ ಸಾರ್ಥಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪ ನಿರ್ದೇಶಕರಾದ, ರಾಜೇಶ್ವರಿ ಹೆಚ್.ಎಸ್, ಕಾಲೇಜಿನ ಪ್ರಾಂಶುಪಾಲರಾದ ವಿನ್ಸೆಂಟ್ ಆಂಟನಿ ಮಸ್ಕರಿನಸ್, ಸೇರಿದಂತೆ ಭೋಧಕರು, ಭೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.