ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಕರ್ನಾಟಕದ 2026-27ನೇ ಸಾಲಿನ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಭರ್ಜರಿ ಅನುದಾನವನ್ನು ಮೀಸಲಿರಿಸುವ ಮೂಲಕ ಜನಪ್ರಿಯ ಹಾಗೂ ಸಾಮಾಜಿಕ ಭದ್ರತೆಯ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ.

ಈ ಬಾರಿ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ತಲಾ 100 ಸಂಖ್ಯಾಬಲದ ಎರಡು ಮಹಿಳಾ ವೃದ್ಧಾಶ್ರಮಗಳನ್ನು ಘೋಷಿಸಲಾಗಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸುವ ಕ್ರಾಂತಿಕಾರಿ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಗೃಹಲಕ್ಷ್ಮಿ ಯೋಜನೆಯ ಭಾರಿ ವೆಚ್ಚ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ನಡುವೆ ಬಜೆಟ್ ಅನ್ನು ಹೇಗೆ ಸರಿದೂಗಿಸಲಾಗುತ್ತದೆ ಎಂಬ ಭಾರೀ ಕುತೂಹಲಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಆರ್ಥಿಕ ನೀಲನಕ್ಷೆಯ ಮೂಲಕ ಉತ್ತರ ನೀಡಿದ್ದಾರೆ.
ಈ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳೆಯರ ಕ್ಷೇಮಾಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಅಸಹಾಯಕ ಮತ್ತು ಒಂಟಿ ಮಹಿಳೆಯರಿಗೆ ಆಸರೆಯಾಗುವ ನಿಟ್ಟಿನಲ್ಲಿ, ತಲಾ 100 ಮಹಿಳೆಯರಿಗೆ ವಸತಿ ಕಲ್ಪಿಸುವ ಸಾಮರ್ಥ್ಯದ ಎರಡು ನೂತನ ಮಹಿಳಾ ವೃದ್ಧಾಶ್ರಮಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದರ ಜೊತೆಗೆ, ಬೆಂಗಳೂರಿನಲ್ಲಿ ಉದ್ಯೋಗಸ್ಥ ಅಲ್ಪಸಂಖ್ಯಾತ ಮಹಿಳೆಯರಿಗಾಗಿ 4 ಹೊಸ ಹಾಸ್ಟೆಲ್‌ಗಳನ್ನು ನಿರ್ಮಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸರ್ಕಾರ ಪೂರಕ ಕ್ರಮ ಕೈಗೊಂಡಿದೆ.
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧದ ಬಿಸಿ
ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲಾಗುತ್ತಿರುವ ಗಂಭೀರ ಅಡ್ಡಪರಿಣಾಮಗಳನ್ನು ತಡೆಗಟ್ಟಲು ಮತ್ತು ಅವರ ಶೈಕ್ಷಣಿಕ ಪ್ರಗತಿಯನ್ನು ಕಾಯ್ದುಕೊಳ್ಳಲು ಕರ್ನಾಟಕ ಸರ್ಕಾರ ಬಿಗಿ ಕ್ರಮಕ್ಕೆ ಮುಂದಾಗಿದೆ. ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಚಟದಿಂದ ಮಕ್ಕಳಲ್ಲಿ ಉಂಟಾಗುತ್ತಿರುವ ಆತಂಕ ಹಾಗೂ ಒತ್ತಡವನ್ನು ಗಮನಿಸಿ 16 ವರ್ಷದೊಳಗಿನ ಮಕ್ಕಳಿಗೆ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳ (Social Media) ಬಳಕೆಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ನಿಷೇಧಿಸಿದೆ.

ಸಾಮಾಜಿಕ ಜಾಲತಾಣಗಳ ನಿಷೇಧದ ಜೊತೆಗೆ, ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ರಾಜ್ಯದ 204 ಬಿ.ಆರ್.ಸಿ (BRC) ಕೇಂದ್ರಗಳಲ್ಲಿ ತಲಾ ಒಬ್ಬ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಕ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಗ್ಯಾರಂಟಿಗಳಿಗೆ ಗರಿಷ್ಠ ಅನುದಾನ
ಗ್ಯಾರಂಟಿ ಯೋಜನೆಗಳ ಬಗ್ಗೆ ಎದ್ದಿದ್ದ ಅನುಮಾನಗಳಿಗೆ ತೆರೆ ಎಳೆದಿರುವ ಸರ್ಕಾರ, ಗೃಹಲಕ್ಷ್ಮಿ ಸೇರಿದಂತೆ ಐದೂ ಯೋಜನೆಗಳಿಗೆ ಬೃಹತ್ ಮೊತ್ತವನ್ನು ಮೀಸಲಿರಿಸಿದೆ:
ಗೃಹಲಕ್ಷ್ಮಿ ಯೋಜನೆ: ಮಹಿಳೆಯರ ಸಬಲೀಕರಣಕ್ಕಾಗಿ ಈ ಯೋಜನೆಗೆ ಅತಿ ಹೆಚ್ಚು ಅಂದರೆ 28,608 ಕೋಟಿ ರೂ. ಹಣವನ್ನು ಕಾಯ್ದಿರಿಸಲಾಗಿದೆ.
ಅನ್ನಭಾಗ್ಯ & ಇಂದಿರಾ ಕಿಟ್: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇಂದಿರಾ ಕಿಟ್ ವಿತರಣೆಗಾಗಿ 6,200 ಕೋಟಿ ರೂ.ಗಳನ್ನು ಘೋಷಿಸಲಾಗಿದೆ.
ಶಕ್ತಿ ಯೋಜನೆ: ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ ಈ ಸಾಲಿನಲ್ಲಿ 5,300 ಕೋಟಿ ರೂ. ಮೀಸಲಿರಿಸಲಾಗಿದೆ.
ಇತರ ಪ್ರಮುಖ ಆಕರ್ಷಣೆಗಳು
ಬೆಂಗಳೂರಿನ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಗೆ ಇನ್ನು ಮುಂದೆ ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’ ಎಂದು ನಾಮಕರಣ ಮಾಡಲಾಗುವುದು.
ಹಸು ಅಥವಾ ಹೆಮ್ಮೆ ಖರೀದಿಸಲು ಆಸಕ್ತಿ ಇರುವವರಿಗೆ ಸರ್ಕಾರದಿಂದ 40 ಸಾವಿರ ರೂ. ಪ್ರೋತ್ಸಾಹಧನ ಸಿಗಲಿದೆ.
ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ಅಂದರೆ 47,224 ಕೋಟಿ ರೂ. ನೀಡಲಾಗಿದ್ದು, ಹೊಸದಾಗಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಘೋಷಿಸಲಾಗಿದೆ.
ರಾಜ್ಯದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ, ಒಟ್ಟು 56 ಸಾವಿರ ಉದ್ಯೋಗಗಳ ಭರ್ತಿಗೆ ಚಾಲನೆ ನೀಡಲಿದೆ.
