ವಾಷಿಂಗ್ಟನ್/ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತಾನೇ ʻದೊಣ್ಣೆ ನಾಯಕ’ ಎಂದು ಬೀಗುವ ಅಮೆರಿಕಕ್ಕೆ ಈಗ ಭಾರತದ ಅನಿವಾರ್ಯತೆ ಅರ್ಥವಾದಂತಿದೆ. ರಷ್ಯಾದಿಂದ ತೈಲ ಖರೀದಿಸಿದರೆ ಸುಂಕ ವಿಧಿಸುತ್ತೇನೆ ಎಂದು ಗುಡುಗಿದ್ದ ಡೊನಾಲ್ಡ್ ಟ್ರಂಪ್, ಈಗ ದಿಢೀರ್ ಆಗಿ ʻ30 ದಿನಗಳ ವಿನಾಯಿತಿ’ ನೀಡಿದ್ದಾರೆ.

ಅಸಲಿಗೆ, ಭಾರತ ಯಾರಿಂದ ತೈಲ ಖರೀದಿಸಬೇಕು ಎಂಬುದನ್ನು ತೀರ್ಮಾನಿಸಲು ಅಮೆರಿಕ ಯಾವ ಸೀಮೆ ಹಕ್ಕುದಾರ? ಎಂಬ ಪ್ರಶ್ನೆ ಈಗ ಅಂತರಾಷ್ಟ್ರೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕೆಲವೇ ದಿನಗಳ ಹಿಂದೆ ಭಾರತದ ಮೇಲೆ 25% ದಂಡಾತ್ಮಕ ಸುಂಕ ಹೇರಿ “ನನ್ನ ಮಾತು ಕೇಳದಿದ್ದರೆ ಶಿಕ್ಷೆ ಖಂಡಿತ” ಎಂಬಂತೆ ವರ್ತಿಸಿದ್ದ ಟ್ರಂಪ್ ಆಡಳಿತ, ಈಗ ಸುಮ್ಮನೆ ಮೆತ್ತಗಾಗಿಲ್ಲ. ಇದರ ಹಿಂದೆ ಅಮೆರಿಕದ ಸ್ವಾರ್ಥ ಮತ್ತು ಅನಿವಾರ್ಯತೆ ಎರಡೂ ಅಡಗಿದೆ ಎನ್ನಲಾಗುತ್ತಿದೆ.

ಯಾಕೆಂದರೆ ಇರಾನ್ ಜೊತೆಗಿನ ಸಂಘರ್ಷ ತಾರಕಕ್ಕೇರಿ ಜಾಗತಿಕ ಇಂಧನ ಪೂರೈಕೆ ಕಡಿದುಹೋದರೆ, ಅಮೆರಿಕದ ಆರ್ಥಿಕತೆಯೂ ಕುಸಿಯುತ್ತದೆ. ಅಂತಹ ಸಮಯದಲ್ಲಿ ಭಾರತದಂತಹ ಬೃಹತ್ ಮಾರುಕಟ್ಟೆಯನ್ನು ಎದುರು ಹಾಕಿಕೊಳ್ಳುವುದು ʻದೊಣ್ಣೆ ನಾಯಕ’ನಿಗೂ ಅಪಾಯಕಾರಿ ಎಂಬುದು ಮನವರಿಕೆಯಾಗಿದೆ. ಮಾರ್ಚ್ 5ರ ಒಳಗೇ ರಷ್ಯಾದಿಂದ ಹೊರಟಿದ್ದ ಹಡಗುಗಳನ್ನು ತಡೆದರೆ, ಅದು ಭಾರತದ ಆಕ್ರೋಶಕ್ಕೆ ಕಾರಣವಾಗುತ್ತಿತ್ತು. ಹಾಗಾಗಿ, “ನಾವು ವಿನಾಯಿತಿ ನೀಡುತ್ತಿದ್ದೇವೆ” ಎಂಬ ಆಟ ಆಡುವ ಮೂಲಕ ತನ್ನ ಮುಖ ಉಳಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತಿದೆ.
ಆರ್ಥಿಕ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು “ಭಾರತ ನಮ್ಮ ಪ್ರಮುಖ ಪಾಲುದಾರ” ಎನ್ನುತ್ತಲೇ, “ಮುಂದೆ ನೀವು ನಮ್ಮ ಬಳಿಯೇ ತೈಲ ಖರೀದಿಸಬೇಕು” ಎಂಬ ಷರತ್ತನ್ನು ಪರೋಕ್ಷವಾಗಿ ಹೇರಿದ್ದಾರೆ. ಇದು ಮುಕ್ತ ವ್ಯಾಪಾರವಲ್ಲ, ಬದಲಿಗೆ ಅಮೆರಿಕದ ತೈಲವನ್ನು ಭಾರತದ ಮೇಲೆ ಹೇರುವ ಇಂಧನ ರಾಜತಾಂತ್ರಿಕತೆಯ ಬೆದರಿಕೆ ಎನ್ನುವಂತಿದೆ.

ಏಪ್ರಿಲ್ 4ರ ತನಕ ಮಾತ್ರ ನಿಮಗೆ ಅವಕಾಶ ಎಂದು ಗಡುವು ನೀಡುವ ಮೂಲಕ ಅಮೆರಿಕ ತನ್ನ ದೊಣ್ಣೆ ನಾಯಕನ ವರ್ತನೆಯನ್ನು ಮುಂದುವರಿಸಿದೆ. ಆದರೆ ಭಾರತವು ರಷ್ಯಾ ಮತ್ತು ಅಮೆರಿಕ ಎರಡನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಚಾಣಕ್ಯ ನೀತಿಯನ್ನು ಮುಂದುವರಿಸುತ್ತಿರುವುದು ಟ್ರಂಪ್‌ಗೆ ನುಂಗಲಾರದ ತುತ್ತಾಗಿದೆ.
ತನ್ನ ದೇಶದ ತೈಲ ಉತ್ಪಾದನೆ ಇತಿಹಾಸದಲ್ಲೇ ಗರಿಷ್ಠ ಮಟ್ಟದಲ್ಲಿದೆ ಎಂದು ಬೀಗುವ ಅಮೆರಿಕ, ಭಾರತದಂತಹ ರಾಷ್ಟ್ರಗಳನ್ನು ತನ್ನ ಮಾರುಕಟ್ಟೆಯ ಗುಲಾಮರನ್ನಾಗಿ ಮಾಡಲು ನೋಡುತ್ತಿದೆ. ಆದರೆ, ಈ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡುವ ಮೂಲಕ ಭಾರತದ ಮಾರುಕಟ್ಟೆ ಶಕ್ತಿಯ ಮುಂದೆ ಅಮೆರಿಕ ಮಂಡಿಯೂರಿದಂತಾಗಿದೆ.