ಎಲ್ಲೆಂದರಲ್ಲಿ ವಾಹನ ಬಿಡುವ ಮುನ್ನ ಎಚ್ಚರ!!! ಮಂಗಳೂರಿನಲ್ಲಿ ಮುಂದುವರಿದ ದ್ವಿಚಕ್ರ ವಾಹನ ಕಳವು

ಮಂಗಳೂರು: ನಗರದ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಸೆ.30ರಿಂದ ಅ.31ರ ವರೆಗೆ ಪಾಂಡೇಶ್ವರ, ಬಂದರು, ಉರ್ವ, ಕದ್ರಿ, ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಸುಮಾರು 11 ಪ್ರಕರಣಗಳು ದ್ವಿಚಕ್ರ ವಾಹನ ಕಳವಾಗಿದ್ದು, ನವೆಂಬರ್‌ ತಿಂಗಳಲ್ಲಿ1ರಿಂದ 30ರ ಅವಧಿಯಲ್ಲಿ ಕಾವೂರು, ಕಂಕನಾಡಿ ನಗರ, ಸುರತ್ಕಲ್‌, ಪಾಂಡೇಶ್ವರ, ಬಂದರು ಠಾಣೆಗಳ ವ್ಯಾಪ್ತಿಯಲ್ಲಿ 9 ದ್ವಿಚಕ್ರ ವಾಹನಗಳು ಕಳವುವಾಗಿವೆ ಎಂದು ಪೊಲೀಸ್‌ ವೈಬ್ಸೈಟ್‌ ನಲ್ಲಿರುವ ಅಂಕಿ ಅಂಶ ತಿಳಿಸಿದೆ.

ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಸಿಕ್ಕಿ ಬಿದ್ದಿರುವ ಇಬ್ಬರು ಆರೋಪಿಗಳು ಕೇರಳ ಮೂಲದವರಾಗಿದ್ದು, ಯಾವುದೋ ಉದ್ದೇಶಕ್ಕೆ ನಗರಕ್ಕೆ ಬಂದವರು ಹೋಗುವಾಗ ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿದ್ದರು. ಬಂಧಿತರಿಂದ ಕಳವು ಮಾಡಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನ ಮಾಡುವವರು ದ್ವಿಚಕ್ರ ವಾಹನವನ್ನು ಕೀಲಿಕೈ ಇಲ್ಲದೆ ಡೈರೆಕ್ಟ್ ಕನೆಕ್ಷನ್‌ ಕೊಟ್ಟು ಕಳ್ಳತನ ಮಾಡುತ್ತಾರೆ. ಹ್ಯಾಂಡ್‌ ಲಾಕ್‌ ಹಾಕದಿದ್ದರೆ ನಿಲ್ಲಿಸಿರುವ ಜಾಗದಿಂದ ಒಂದಷ್ಟು ದೂರ ತಳ್ಳಿಕೊಂಡು ಅಥವಾ ಇಳಿಜಾರು ಜಾಗವಾದರೆ ಕುಳಿತುಕೊಂಡು ಹೋಗಿ ಅಲ್ಲಿ ಬಳಿಕ ಡೈರೆಕ್ಟ್ ಮಾಡಿ ಅಲ್ಲಿಂದ ಚಲಾಯಿಸಿಕೊಂಡು ಹೋಗುತ್ತಾರೆ.

ವಾಹನ ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ವಾಹನದ ನೋಂದಣಿ ಬ್ಲಾಕ್‌ ಮಾಡಲಾಗುತ್ತದೆ. ಇದರಿಂದ ಅದೇ ನೋಂದಣಿ ಸಂಖ್ಯೆಯಿಂದ ವಾಹನವನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಂಬರ್‌ಪ್ಲೇಟ್‌ ಬದಲಾಯಿಸಿ, ಹೊರ ರಾಜ್ಯ, ಹಳ್ಳಿ ಪ್ರದೇಶದ ವ್ಯಕ್ತಿಗೆ ವಾಹನವನ್ನು ಮಾರಾಟ ಮಾಡಿದರೆ ವಾಹನ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.

ನಗರದಲ್ಲಿ ವಾಹನ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಕಾರಣ, ದ್ವಿಚಕ್ರ ವಾಹನಗಳ ಮಾಲಕರು ಎಚ್ಚೆತ್ತುಕೊಳ್ಳಬೇಕು. ವಾಹನವನ್ನು ನಿಲ್ಲಿಸಿ ಹೋಗುವ ಸ್ಥಳವೂ ಕೆಲವೊಮ್ಮೆ ಕಳ್ಳರಿಗೆ ಸುಲಭವಾಗುವಂತಿರುತ್ತದೆ. ವಾಹನವನ್ನು ಹ್ಯಾಂಡ್‌ ಲಾಕ್‌ ಮಾಡಿ ಕೀಲಿಕೈಯನ್ನು ಮರೆಯದೆ ನಮ್ಮಲ್ಲೇ ಇರಿಸಿಕೊಳ್ಳಬೇಕು. ಸಿಸಿ ಕೆಮರಾ ಕಣ್ಗಾವಲು, ಜನರ ಓಡಾಟ ಹೆಚ್ಚು ಇರುವಲ್ಲಿ ನಿಲ್ಲಿಸುವುದರಿಂದ ಸುರಕ್ಷತೆ ಹೆಚ್ಚಿರುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!