ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳ ಸಾವು

ಗುವಾಹಟಿ: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ(IAF) “ಸುಖೋಯ್-30 MKI” ಯುದ್ಧ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಷ್ ದುರಗಕರ್ ಮೃತಪಟ್ಟ ವೀರ ಯೋಧರು.

ಜೋರ್ಹತ್ ವಾಯುನೆಲೆಯಿಂದ ತರಬೇತಿ ಕಾರ್ಯಾಚರಣೆಗಾಗಿ ಗುರುವಾರ(ಮಾ.05) ಸಂಜೆ ಈ ಯುದ್ಧ ವಿಮಾನ ಟೇಕ್-ಆಫ್ ಆಗಿತ್ತು. ಉಡ್ಡಯಣಗೊಂಡ ಕೆಲವೇ ಸಮಯದಲ್ಲಿ ವಿಮಾನವು ರೇಡಾರ್ ಸಂಪರ್ಕ ಕಳೆದುಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವಾಯುಪಡೆ, ನಾಗರಿಕ ಆಡಳಿತ ಮತ್ತು ಪೊಲೀಸರ ತಂಡವು ಸ್ಥಳೀಯರ ನೆರವಿನೊಂದಿಗೆ ಬೃಹತ್ ಶೋಧ ಕಾರ್ಯ ಆರಂಭಿಸಿತು.

ಶುಕ್ರವಾರ ಮುಂಜಾನೆ ಸುಮಾರು 1 ಗಂಟೆಯ ಸುಮಾರಿಗೆ ಜೋರ್ಹತ್ ವಾಯುನೆಲೆಯಿಂದ 60 ಕಿ.ಮೀ ದೂರದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಅಪಘಾತದ ತೀವ್ರತೆಗೆ ವಿಮಾನವು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪೈಲಟ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

error: Content is protected !!